logo

ತಂಪಾದ ವಾತಾವರಣದಲ್ಲಿ ಕಾಡುವ ಕೆಮ್ಮು, ನೆಗಡಿಗೆ ರಾಮಭಾಣ !!

By: Amulya Rajesh
ತಂಪಾದ ವಾತಾವರಣದಲ್ಲಿ ದೇಹವನ್ನು ಸಾಧ್ಯವಾದಷ್ಟು ಉಷ್ಣವಾಗಿಟ್ಟುಕೊಳ್ಳಬೇಕು. ಬೆಚ್ಚಗಿನ ಉಡುಪು ಧರಿಸಿದಾಕ್ಷಣ ದೇಹದ ಉಷ್ಣತೆ ಹೆಚ್ಚಾಗುವುದಿಲ್ಲ. ನಿತ್ಯ ಸೇವಿಸುವ ಆಹಾರದಲ್ಲೇ ನಿಮ್ಮ ದೇಹದ ತಾಪಮಾನ ಹೆಚ್ಚಿಸುವ ಶಕ್ತಿ ಅಡಗಿದೆ.
ಶೀತ ಮತ್ತು ಕೆಮ್ಮಿನ ಮೂಲಕ ನಮ್ಮ ದೇಹದಿಂದ ಸಾಕಷ್ಟು ನೀರು ಹೊರಹರಿಯುತ್ತದೆ. ಇದಕ್ಕೂ ಮುಖ್ಯವಾಗಿ ವೈರಸ್ಸುಗಳ ವಿರುದ್ಧ ಸೆಣೆಸಲು ನಮ್ಮ ಬಿಳಿರಕ್ತಕಣಗಳಿಗೆ ಹೆಚ್ಚಿನ ನೀರು ಬೇಕು.
ಆ ಕಾರಣ ಸಾಧ್ಯವಾದರೆ ಬಿಸಿನೀರು, ಇಲ್ಲದಿದ್ದರೆ ಉಗುರುಬೆಚ್ಚನೆಯ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಲೇ ಇರುವುದು ಒಳ್ಳೆಯದು.


1. ಒಣಕೆಮ್ಮಿಗೆ ಅರಿಶಿಣ ರಾಮಬಾಣ. ಅರಿಶಿಣ ಕೊಂಬನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿ.

2. ಕುದಿಯುವ ನೀರಿಗೆ ಅರಿಶಿಣ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಕೆಮ್ಮ ಹಾಗೂ ಶೀತ ನಿವಾರಣೆ ಆಗುತ್ತದೆ.

3. 5ಎಂಎಲ್ ಈರುಳ್ಳಿ ರಸಕ್ಕೆ 10ಎಂಎಲ್ ಜೇನುತುಪ್ಪ ಸೇರಿಸಿ ಸೇವಿಸಿ. ಕೆಮ್ಮು ಮಾಯ.

4. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಕುದಿಸಿ. ಅದಕ್ಕೆ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ನಿವಾರಣೆ ಆಗುತ್ತದೆ.

5. ಒಣದ್ರಾಕ್ಷಿಯನ್ನು ತೊಳೆದು ರುಬ್ಬಿ ಅದಕ್ಕೆ ನೀರು ಹಾಗೂ ಸಕ್ಕರೆ ಸೇರಿಸಿ ಬಿಸಿ ಮಾಡಿ ಕುಡಿಯಿರಿ. ಕೆಮ್ಮು ಕಡಿಮೆಯಾಗುತ್ತದೆ.

6. 1/4 ಕಪ್ ನೀರಿಗೆ ಎರಡು ಚಮಚ ಜೇನು, ಲಿಂಬೆ ರಸ, ದಾಲ್ಚಿನಿ ಚಕ್ಕೆ ಹಾಗೂ ಒಂದು ನೀಲಗಿರಿ ಎಲೆ ಸೇರಿಸಿ ಸೇವಿಸಿ ಕೆಮ್ಮು ನಿವಾರಣೆ ಆಗುತ್ತದೆ.

7. ಮಕ್ಕಳಲ್ಲಿ ಕಾಣಿಸುವ ಕೆಮ್ಮಿಗೆ ಸಾಸಿವೆ ಎಣ್ಣೆ ಹೆಚ್ಚು ಪರಿಣಾಮಕಾರಿ. ಎಣ್ಣೆಯನ್ನು ಮಕ್ಕಳ ಎದೆಗೆ ಹಚ್ಚಿ ತಿಕ್ಕಿ.

8. ಕಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ.

9. ಸ್ನಾನಗೃಹದಲ್ಲಿ ಸಾಕಷ್ಟು ಆವಿಯಾಗುವಂತೆ ಮಾಡಿ ಈ ಆವಿಯನ್ನು ಉಸಿರಾಡುತ್ತಾ ಬಿಸಿಬಿಸಿ ನೀರಿನಿಂದ ಸ್ನಾನ ಮಾಡುವ ಮೂಲಕ ಮೂಗಿನ ಹೊಳ್ಳೆ, ಗಂಟಲು, ಶ್ವಾಸನಾಳಗಳು ಸ್ವಚ್ಛಗೊಳ್ಳುತ್ತವೆ. ಕಫ ಕರಗಿ ಕೆಮ್ಮು ಥಟ್ಟನೇ ಕಡಿಮೆಯಾಗುತ್ತದೆ. ಅಲರ್ಜಿಯಿಂದಾದ ಕೆಮ್ಮಿಗೂ ಈ ವಿಧಾನ ಅತ್ಯುತ್ತಮವಾಗಿದೆ.

10. ಬಿಸಿನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಬಾಯಿಯನ್ನು ಮುಕ್ಕಳಿಸಿ. ಬಾಯಿಯನ್ನು ಮೇಲೆತ್ತಿ ಗಳಗಳ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಉಪ್ಪಿನ ಕಾರಣ ಕಟ್ಟಿಕೊಂಡಿದ್ದ ಕಫ ಸಡಿಲವಾಗಿ ಹೊರಬರುತ್ತದೆ.

11. ಅರಿಶಿನ ಬೆರೆಸಿದ ಹಾಲನ್ನು ಉಪಯೋಗಿಸಿ ಮಾಡಿದ ಟೀ ಕುಡಿಯುವ ಮೂಲಕ ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ. ಅರಿಶಿನದ ಪ್ರತಿಜೀವಿಕ (antibiotic) ಗುಣಗಳ ಕಾರಣ ಕಫ ಶೀಘ್ರವಾಗಿ ಹೊರಬರುತ್ತದೆ. ಇದು ಮಕ್ಕಳಿಗೂ ಹಿರಿಯರಿಗೂ ಕುಡಿಯಲು ಸುರಕ್ಷಿತವಾಗಿದೆ.

12. ಹಸಿನೆಲ್ಲಿಕಾಯಿಯನ್ನು ತಿನ್ನುವುದರಿಂದ ಶೀತವಾಗದಂತೆ ತಡೆಗಟ್ಟಬಹುದು. ಚಳಿ ಪ್ರಾರಂಭವಾಗುತ್ತಿದ್ದತೆಯೇ ಕೆಲವು ನೆಲ್ಲಿಕಾಯಿಗಳನ್ನು ಮನೆಯಲ್ಲಿರಿಸಿ ಆಗಾಗ ತಿನ್ನುತ್ತಿರುವುದರಿಂದ ಶೀತ, ಕೆಮ್ಮು ನೆಗಡಿಗಳಿಂದ ದೂರವಿರಬಹುದು.

13. ಮಾಮೂಲು ದಾಳಿಂಬೆ ಜ್ಯೂಸ್ ಗೆ ಒಂದು ಚಿಟಿಕೆ ಶುಂಠಿ ಪೌಡರ್ ಮತ್ತು ಪಿಪ್ಪಾಲಿ ಪೌಡರ್ ಹಾಕಿಕೊಂಡು ಸೇವಿಸಿ. ದಾಳಿಂಬೆಯಲ್ಲಿ ವಿಟಮಿನ್ ಎ ಮತ್ತು ಸಿ ಧಾರಾಳವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು. ಇದಕ್ಕೆ ಶುಂಠಿ ಮತ್ತು ಪಿಪ್ಪಲಿ ಸೇರಿಸಿದರೆ ಶೀತ ಪ್ರಕೃತಿಯವರಿಗೆ ಒಳ್ಳೆಯ ಮನೆ ಮದ್ದು.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್