ಮಜ್ಜಿಗೆ ಮಹಿಮೆ ತಿಳಿಯಿರಿ ...
By: Raghavendra Naik
ಮಜ್ಜಿಗೆ ಮಹಿಮೆ ತಿಳಿಯಿರಿ ...
ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯ. ಮಜ್ಜಿಗೆಯು ಕೇವಲ ಒಂದು ಆಹಾರ ಪದಾರ್ಥವಲ್ಲ. ಹಲವಾರು ಔಷಧೀಯ ಗುಣಗಳಿವೆ. ಮಜ್ಜಿಗೆಯು ಮಾನವನಿಗೆ ಅಮೃತ ಸಮಾನ
ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅತೀ ಕಡಿಮೆ ಅಂದರೆ, ಹಾಲಿನಲ್ಲಿನ ಶೇಕಡ ಅರ್ಧದಷ್ಟು ಕಡಿಮೆ ಕ್ಯಾಲೊರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.
ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಇದರ ಉಷ್ಣ ಗುಣದಿಂದಾಗಿ ವಾತ ಹಾಗೂ ಕಫ ವಿಕಾರಗಳನ್ನು ನಿಯಂತ್ರಿಸುತ್ತದೆ.
ಬೇಸಿಗೆಯಲ್ಲಂತೂ ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.
ಮಜ್ಜಿಗೆಯು ಆಯುರ್ವೇದ ಚಿಕಿತ್ಸೆಯಲ್ಲಿ ಬಹಳವಾಗಿ ಉಪಯೋಗಿಸುವ ಪ್ರಮುಖ ಆಹಾರ ಪದಾರ್ಥ.
ಆಯುರ್ವೇದದಲ್ಲಿ ಮಜ್ಜಿಗೆಯನ್ನು ರೋಗಿಗಳ ಚಿಕಿತ್ಸೆಗಷ್ಟೇ ಅಲ್ಲದೆ, ರೋಗವನ್ನು ತಡೆಯುವ ಉದ್ದೇಶವಾಗಿ ಸ್ವಸ್ಥರಲ್ಲಿ ಆಹಾರ ರೂಪವಾಗಿ ಬಳಸಲಾಗುತ್ತದೆ.
ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ. ಲಿವರ್ ನಲ್ಲಿನ ವಿಷಗುಣಗಳನ್ನು ತೆಗೆದುಹಾಕುತ್ತದೆ.
ಕರುಳನ್ನು ಶುದ್ದಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಕರುಳಿನಲ್ಲಿ ಹಲವು ರಸಾಯನಿಕ ಕ್ರಿಯೆಗಳಿಗೆ ಪ್ರಾಕೃತವಾಗಿ ಅಗತ್ಯವಿರುವ ಜೈವಿಕ ಬ್ಯಾಕ್ಟೀರಿಯಾವನ್ನು ವೃದ್ದಿಸಲು ಸಹಕಾರಿಯಾಗುತ್ತದೆ.
ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ.
ಅತಿಯಾದ ಬೊಜ್ಜುತನ, ಕೊಲೆಸ್ಟ್ರಾಲ್ ನಿಂದಾಗುವ ವಿಕಾರಗಳಿಗೆ ಮಜ್ಜಿಗೆಯು ಪ್ರಮುಖ ಆಹಾರ.

ನಿತ್ಯ ಮಜ್ಜಿಗೆಯ ಸೇವನೆಯಿಂದಾಗಿ ಜಠರ ರೋಗವನ್ನು ನಿಯಂತ್ರಿಸುತ್ತದೆ. ಜೀರ್ಣಶಕ್ತಿಯನ್ನು ಬಲಗೊಳಿಸುತ್ತದೆ ಹಾಗು ಜಠರದಲ್ಲಾಗುವ ಸೋಂಕನ್ನು ತಡೆಯುತ್ತದೆ.
ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.
ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
ಅರ್ಧ ಚಮಚ ಶುಂಠಿರಸ ಹಾಗು ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಅಸಿಡಿಟಿ, ಮಲಬದ್ದತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
ಅಷ್ಟೇ ಅಲ್ಲದೆ, ನಿತ್ಯ ಮಜ್ಜಿಗೆಯ ಸೇವನೆಯು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗು ಮುಪ್ಪುನ್ನು ತಡೆಯುತ್ತದೆ.