ವರ್ಣರಂಜಿತ ರಾಜಕಾರಣಿ ಬಂಗಾರಪ್ಪ
ಬೆಂಗಳೂರು : ಕರ್ನಾಟಕದ ಮರೆಯಲಾಗದ ಮಾಣಿಕ್ಯ, ಬಡವರ ಬಂದು, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪ ಕನ್ನಡ ನಾಡು ಕಂಡ ವರ್ಣರಂಜಿತ ರಾಜಕಾರಣಿ. ನೇರ ನುಡಿಯ ಮಾತು, ಬಡವರ ಬಗ್ಗೆ ಅವರಿಗೆ ಇದ್ದ ಕಾಳಜಿ ಮತ್ತು ಪ್ರೀತಿ ಕರ್ನಾಟಕದ ಜನತೆ ಎಂದೂ ಮರೆಯಾಗಲೂ ಸಾಧ್ಯವಿಲ್ಲ. ಅವರು ಯಾವಾಗಲು ಸರಿ ಅನಿಸಿದ್ದನ್ನೇ ಮಾಡಿದವರು, ರಾಜ್ಯದ ಹಿತಕ್ಕಾಗಿ ಒಳ್ಳೆಯ ಕೆಲಸ ಮಾಡಲು ಅವರು ಯಾರಿಗೂ ಹೆದುರುತ್ತಿರಲಿಲ್ಲ. ಅವರ ನಂತರ ಅದೆಷ್ಟೋ ಮುಖ್ಯಮಂತ್ರಿಗಳು ಬಂದುಹೋದರು, ಆದರೆ ಕರ್ನಾಟಕದ ನೆಲ-ಜಲ ವಿಷಯದಲ್ಲಿ ಹೋರಾಟ ನಡೆಯುವಾಗ ಬಂಗಾರಪ್ಪನವರೊಬ್ಬರ ಫೋಟೋಗಳು ಮಾತ್ರ ಈಗಲೂ ರಾರಾಜಿಸುತ್ತದೆ. ಕರ್ನಾಟಕದ ಜನತೆ ನೆಲ ಜಲದ ವಿಷಯದಲ್ಲಿ ಬಂಗಾರಪ್ಪನವರಿಗೆ ಇದ್ದ ಕಾಳಜಿಯನ್ನು ಈಗಲೂ ನೆನೆಸುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.
ಅಭಿಮಾನಿ
ರಾಜಕಾರಣಿಗಳಿಗೆ ಬೆಂಬಲಿಗರು ಇರುವುದು ಸಾಮಾನ್ಯ ಆದರೆ ಅಭಿಮಾನಿಗಳಿದ್ದಿದ್ದು ಕೇವಲ ಬಂಗಾರಪ್ಪನವರಿಗೆ ಮಾತ್ರ. ಅಧಿಕಾರದಲ್ಲಿದ್ದಾಗ ಎಲ್ಲರಿಗೂ ಬೆಂಬಲಿಗರ ಪಡೆ ಹುಟ್ಟಿಕೊಳ್ಳುವುದು ಸಾಮಾನ್ಯ, ಆದರೆ ಬಂಗಾರಪ್ಪನವರು ಎಷ್ಟೇ ಪಕ್ಷ ಬದಲಿಸಿದರೂ, ಎಷ್ಟೇ ಹೊಸ ಪಕ್ಷ ಕಟ್ಟಿದರೂ ಅವರನ್ನು ಕಣ್ಣು ಮುಚ್ಚಿ ಹಿಂಬಾಲಿಸುವ ಅಭಿಮಾನಿಗಳಿದ್ದರು. ಒಂದಾನೊಂದು ಕಾಲದಲ್ಲಿ ಕರ್ನಾಟಕದಲ್ಲಿ ಅಸ್ತಿತ್ವ ಕಾಣಲು ಪರದಾಡುತ್ತಿದ್ದ ಬಿಜೆಪಿ, ಅಧಿಕಾರಕ್ಕೆ ಬರಲು ಹೇಗೆ ಸಾಧ್ಯವಾಯಿತು ಎಂದು ಕಾರಣ ಹುಡುಕಲು ಹೋದರೆ ಅದಕ್ಕೆ ಸಿಗುವ ಉತ್ತರಗಳಲ್ಲಿ ಬಹುಪಾಲು ಬಂಗಾರಪ್ಪವನರಿಗೆ ಸಲ್ಲುತ್ತದೆ. ಬಂಗಾರಪ್ಪನವರ ಸೇರ್ಪಡೆಯಿಂದ ರಾಜ್ಯದಲ್ಲಿ ಬಿಜೆಪಿಗೆ ಜಾತ್ಯತೀತ, ಅದರಲ್ಲೂ ಹಿಂದುಳಿದವರ ಬಲ ದೊರಕಿದಂತಾಯಿತು. ಆದರೆ ಆ ಪಕ್ಷದೊಳಗಿನ ತಿಕ್ಕಾಟ ಅವರಿಗೆ ಇಷ್ಟವಾಗಲಿಲ್ಲವೇನೋ ಅಲ್ಲಿಂದ ಹೊರ ನಡೆದೇಬಿಟ್ಟರು.
ಗಂಡೆದೆ
ಬಂಗಾರಪ್ಪನವರು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟು ರಾಜಕಾರಣ ಮಾಡಿಲ್ಲ, ಕಾಂಗ್ರೆಸ್ ನಂತ ಪಕ್ಷದಲ್ಲಿದ್ದರೂ ಅವರು "ಜಿ ಹುಜೂರ್" ಸಂಸ್ಕ್ರತಿಗೆ ಬಗ್ಗಲಿಲ್ಲ. ಅದೆಷ್ಟೋ ರಾಜಕಾರಣಿಗಳು ತಮ್ಮ ಅಧಿಕಾರ ಹಾಗೂ ಕೇವಲ ಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಮಾಡಬಾರದ ಕೆಲಸ ಮಾಡಿ ಜನರ ವಿಶ್ವಾಸಕ್ಕಷ್ಟೇ ಅಲ್ಲ ತಮ್ಮ ಆತ್ಮವಿಶ್ವಾಸಕ್ಕೂ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆದರೆ ಬಂಗಾರಪ್ಪನವರು ಹಾಗಲ್ಲ ಮುಖ್ಯಮಂತ್ರಿ ಪದವಿಯನ್ನೂ ಲೆಕ್ಕಿಸದೆ ಹೈಕಮಾಂಡ್ ವಿರುದ್ಧ ಹೋದರು, ಹೊರತು ರಾಜ್ಯದ ಜನರ, ರೈತರ ಹಿತವನ್ನು ಬಲಿಕೊಡಲಿಲ್ಲ, ಅವರೆಂದು ತಮ್ಮ ಆತ್ಮಗೌರವ, ಆತ್ಮವಿಶ್ವಾಸದ ವಿರುದ್ಧ ನಡೆದುಕೊಂಡವರಲ್ಲ, ಅದಕ್ಕೆ ಅವರಿಗೆ "ಗಂಡೆದೆಯ ಬಂಗಾರಪ್ಪ" ಅಂದು ಕರೆಯುತ್ತಿದ್ದರು.

ಮಾತುಗಾರ
ಬಂಗಾರಪ್ಪನವರು ಯಾವುದೇ ತಯಾರಿ ಇಲ್ಲದೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲ ಮಾತುಗಾರರಾಗಿದ್ದರು, ಅವರ ಪ್ರತಿಯೊಂದು ಮಾತು ಅರ್ಥಗರ್ಭಿತವಾಗಿರುತ್ತಿತ್ತು. ಅವರ ಮಾತುಗಳಲ್ಲಿ ಎಷ್ಟು ಸೆಳೆತವಿತ್ತೆಂದರೆ, ಪೂರ್ವ ಘೋಷಣೆ ಇಲ್ಲದೆ ಬಂಗಾರಪ್ಪನವರು ಅಕಸ್ಕಿಕವಾಗಿ ಯಾವುದೇ ಸಮಾರಂಭದಲ್ಲಿ ಭಾಗವಹಿಸಿ ಮೈಕ್ ಹಿಡಿದರು ಅಂದರೆ ಸಾಕು ಪ್ರೇಕ್ಷಕರ ಮಹಾಪೂರವೇ ಹರಿದು ಬರುತಿತ್ತು. ಅವರ ಮಾತು ಕೇಳಲು ಜನರಿಗೆ ಕುರ್ಚಿ ಶಾಮಿಯಾನ ಹಾಕಬೇಕಂತ ಇರ್ಲಿಲ್ಲ, ಮೈದಾನದಲ್ಲಿ ಜಾಗ ಸಿಕ್ಕಿಲ್ಲ ಅಂದ್ರೂ ರಸ್ತೆ ಮೇಲಾದರೂ ನಿತ್ಕೊಂಡೆ ಗಂಟೆ ಗಟ್ಟಲೆ ಅವರ ಮಾತು ಕೇಳುತ್ತಿದ್ದರು, ಅಷ್ಟರ ಮಟ್ಟಿಗೆ ಅವರ ಮಾತಿನಲ್ಲಿ ಜನ ಮುಳುಗಿಹೋಗುತ್ತಿದರು.
ಮುಖ್ಯಮಂತ್ರಿಯಾದ ಬಂಗಾರಪ್ಪನವರು ಜಾರಿಗೊಳಿಸಿದ ಅನೇಕ ಯೋಜನೆಗಳಿಂದ ಅವರ ಜನಪ್ರಿಯತೆ ಹೈಕಮಾಂಡ್ ಗಿಂತಲೂ ಜಾಸ್ತಿ ಬೆಳೆಯಲಾರಂಭಿಸಿತು. ಇದನ್ನು ಸಹಿಸದ ಹೈಕಮಾಂಡ್ ಇವರನ್ನು ಹೇಗಾದರೂ ಕೆಳಗಿಳಿಸಿ, ತಮಗೆ "ಜಿ ಹುಜೂರ್" ಅನ್ನುವಂತವರನ್ನು ಅಧಿಕಾರಕ್ಕೆ ತರಲು ನಿರ್ಧರಿಸಿತು. ಆಗಲೇ ಶುರುವಾಗಿದ್ದು ಕ್ಲಾಸಿಕ್ ಕಂಪ್ಯೂಟರ್ ಹಗರಣದ ತನಿಖೆ. ಭ್ರಷ್ಟ ರಾಜಕಾರಣಿಗಳ ಪಿತೂರಿಯಿಂದ ಹಗರಣದಲ್ಲಿ ತಮ್ಮ ಹೆಸರು ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದರು. ಕೆಲವು ವರ್ಷಗಳ ನಂತರ ಅವರ ಮೇಲಿದ್ದ ಆರೋಪ ಸುಳ್ಳು ಎನ್ನುವುದು ತನಿಖಾ ತಂಡದಿಂದ ಬಹಿರಂಗವಾಯಿತು. ಆದರೆ ಈ ಸುಳ್ಳು ಆರೋಪದಿಂದ ವಿನಾಕಾರಣ ಅವರು ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿದವರು ಇನ್ನೂ "ಜಿ ಹುಜೂರ್" ಅಂತ ಹೇಳಿ ದುಡ್ಡು ಮಾಡಿಕೊಳ್ಳುತ್ತಲೇ ಇದ್ದಾರೆ ಅನ್ನೋದೇ ವಿಪರ್ಯಾಸ.
ಅವರ ಮೇಲೆ ಜನರ ಪ್ರೀತಿ ಎಷ್ಠರ ಮಟ್ಟಿಗೆ ಇತ್ತೆಂದರೆ ಅವರ ಅಂತಿಮ ಕ್ರಿಯೆಯ ಸಂದರ್ಭದಲ್ಲಿ ಆ ಸ್ಥಳಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದಿದ್ದರೂ ಲಕ್ಷಗಟ್ಟಲೆ ಜನ ಸೇರಿದ್ದರು. ಅದೊಂದು ಕಾಡಿನಲ್ಲಿ ಕುಂಭಮೇಳ ನಡೆದಂತಿತ್ತು. ಅವರ ಜೀವನದ ಕೊನೆಯ ದಿನಗಳಲ್ಲಿ ಯಾವುದೇ ಅಧಿಕಾರದಲ್ಲಿಲ್ಲದಿದ್ದರೂ ಅಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದು, ಬಹುಷಃ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಒಬ್ಬರು ತೀರಿಕೊಂಡರೂ ಆ ಮಟ್ಟಿಗೆ ಜನ ಸೇರಲು ಸಾಧ್ಯವಿರಲಿಕ್ಕಿಲ್ಲ. ಅದು ತಮ್ಮ ಮಹಾನ್ ನಾಯಕನ ಜನಪ್ರಿಯತೆಗೆ ಅವರ ಅಭಿಮಾನಿಗಳು ಕೊಟ್ಟ ಪುರಾವೆ ಅಗಿತ್ತು.
ಬಂಗಾರಪ್ಪ ಇವತ್ತು ನಮ್ಮೊಡನೆ ಇಲ್ಲದೆ ಇರಬಹುದು, ಆದರೆ ಅವರ ಅಭಿಮಾನ ಅವರ ಅಭಿಮಾನಿಗಳಾದ ನಮ್ಮೊಳೊಗೆ ಎಂದೆಂದೂ ಇರುತ್ತದೆ.