ಛಲ ಪ್ರಯತ್ನವಿದ್ದರೆ ಗುರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ತೇಜಸ್ವಿ ನಾಯ್ಕ
ಭಟ್ಕಳ : ಪ್ರತಿಯೊಬ್ಬರೂ ಕೀಳರಿಮೆಯಿಂದ ಹೊರಗೆ ಬರಬೇಕು. ಸದೃಢ ಮನಸ್ಥಿತಿ, ಛಲ, ಪ್ರಯತ್ನ ನಿಮ್ಮದಾಗಿದ್ದರೆ ಗುರಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಬರ್ವಾನಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ತೇಜಸ್ವಿ ನಾಯ್ಕ ಹೇಳಿದರು.
ಅವರು ರವಿವಾರ ಇಲ್ಲಿನ ಶ್ರೀ ನಾಗಯಕ್ಷೆ ಸಭಾಭವನದಲ್ಲಿ ಜೆ.ಡಿ.ನಾಯ್ಕ ಅಭಿಮಾನಿ ಬಳಗದಿಂದ ಆಯೋಜಿಸಲಾದ `ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಬೃಹತ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು 7 ರಿಂದ 10 ವರ್ಷಗಳನ್ನು ಭವಿಷ್ಯಕ್ಕಾಗಿ ಮುಡಿಪಾಗಿಡಬೇಕು. 10 ವರ್ಷಗಳ ನಂತರ ನಾವು ಎಲ್ಲಿರಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ನಮ್ಮಲ್ಲಿರುವ ಧನಾತ್ಮಕ ಅಂಶಗಳನ್ನು ಕ್ರೋಢಿಕರಿಸಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳುತ್ತ ಮುನ್ನಡೆದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎಂದರು. ಕರ್ನಾಟಕ ಕರಾವಳಿಯಲ್ಲಿ ಹೆಚ್ಚಿನ ಪ್ರತಿಭಾವಂತರಿದ್ದು, ವೈದ್ಯಕೀಯ ಹಾಗೂ ಸಾಫ್ಟವೇರ್ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಿದೆ. ನಾಗರಿಕ ಸೇವೆಗಳ ಅರ್ಹತೆಯನ್ನು ಗಿಟ್ಟಿಸಿಕೊಳ್ಳುವುದು ಕಷ್ಟ ಎಂದು ತಿಳಿದುಕೊಳ್ಳದೇ ಪ್ರಯತ್ನಿಸಿದರೆ ಇಲ್ಲಿಯೂ ಅವಕಾಶಗಳು ಹೆಚ್ಚಿವೆ. ಈ ಭಾಗದ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡಿರುವ ಹಿರಿಯ ಅಧಿಕಾರಿಗಳ ಅನುಭವವನ್ನು ಬಳಸಿಕೊಂಡು ಗುರಿ ತಲುಪುವಂತೆ ಕರೆ ನೀಡಿದರು. ವೇದಿಕೆಯಲ್ಲಿ ರಾಜೇಶ ನಾಯ್ಕ IFS, ನ್ಯಾಯಾಧೀಶ ರವಿ ನಾಯ್ಕ, ಡಿಎಫ್‍ಓ ಗಣಪತಿ ನಾಯ್ಕ, ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ ದೇವಡಿಗ, ಅಣ್ಣಪ್ಪ ಗುಳ್ಳರಿ, ನಿಚ್ಚಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಎಮ್.ಆರ್.ನಾಯ್ಕ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.