ಪೊಲೀಸ್ ದೌರ್ಜನ್ಯದ ವಿರುದ್ಧ ರಾಜ್ಯಪಾಲರಿಗೆ ದೂರು: ಭಟ್ಕಳ ನಾಮಧಾರಿ ಸಂಘ
ಭಟ್ಕಳ : ಕೆಲದಿನಗಳ ಹಿಂದೆ ಭಟ್ಕಳದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಮಧಾರಿ ಯುವಕರನ್ನೇ ಗುರಿಯಾನ್ನಾಗಿ ಮಾಡಿ, ಅವರ ಮೇಲೆ ದೊಂಬಿ, ದರೋಡೆಯಂತ ಪ್ರಕರಣಗಳನ್ನು ದಾಖಲಿಸಿ, ನಮ್ಮ ಸಮಾಜದ ಯುವಕರ ಮನೆಗಳಿಗೆ ಮಧ್ಯರಾತ್ರಿಯಲ್ಲಿ ನುಗ್ಗಿ, ಹೆಂಗಸರು ಮಕ್ಕಳೆಂದು ನೋಡದೆ ಬೈದು ಅಮಾನುಷವಾಗಿ ವರ್ತಿಸಿ ಅವರನ್ನು ಬಂದಿಸುತ್ತಿದ್ದಾರೆ, ಈ ದೌರ್ಜನ್ಯದಿಂದ ಭಯಭೀತರಾದ ನಮ್ಮ ಸಮಾಜದ ಸುಮಾರು 500 ಯುವಕರು ಮನೆ ಬಿಟ್ಟು ತರೆಮರೆಸಿಕೊಳ್ಳುವಂತಾಗಿದೆ. ಈ ಪೊಲೀಸ್ ದೌರ್ಜನ್ಯದ ತಕ್ಷಣ ನಿಲ್ಲಿಸಿ, ಈ ಪೊಲೀಸ್ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ನಮ್ಮ ಸಮಾಜದ ಯುವಕರ ಮೇಲೆ ಹಾಕಿರುವ ದರೋಡೆಯಂತ ಪ್ರಕರಣವನ್ನು ಈ ಕೂಡಲೇ ಹಿಂಪಡಿಯಬೇಕು ಎಂದು ರಾಜ್ಯಪಾಲರಿಗೆ ಭಟ್ಕಳದ ನಾಮಧಾರಿ ಅಭಿವೃದ್ಧಿ ಸಂಘದ ವತಿಯಿಂದ ಮನವಿ ಪತ್ರವನ್ನು ಬರೆದು ನಗರದ ಸಹಾಯಕ ಕಮಿಷನರ್ ಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸೂರಜ್ ನಾಯ್ಕ ಸೋನಿ, ಕುಮಾರ ಮಾರ್ಕಂಡೇಯ, ಯಶೋಧರ ನಾಯ್ಕ, ಇತರರು ಇದ್ದರು. ಇದೇ ಸಂದರ್ಭದಲ್ಲಿ ಮೃತ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ಅತಿ ಹೆಚ್ಚು ಪರಿಹಾರ ನೀಡಬೇಕೆಂದು ಕೋರಿ ಇನ್ನೊಂದು ಮನವಿಯನ್ನೂ ಕೂಡ ಹಸ್ತಾಂತರಿಸಲಾಯಿತು.
ಪುರಸಭೆಯ ಅಂಗಡಿ ಮಳಿಗೆಯ ಹರಾಜಿನ ಪ್ರಕ್ರಿಯೆಯಲ್ಲಿ ತನಗಾದ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸಮಾಜದ ಭಟ್ಕಳ ತಾಲೂಕಿನ ಆಸರಕೇರಿ ನಿವಾಸಿ ರಾಮಚಂದ್ರ ನಾಗಪ್ಪ ನಾಯ್ಕ ಪುರಸಭೆಯ ಕಟ್ಟಡದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು, ಇದರ ಬಗ್ಗೆ ನಮ್ಮ ನ್ಯೂಸ್.ನಾಮಧಾರಿ.ಕಂ ನಲ್ಲಿ ಈಗಾಗಲೇ ಪ್ರಕಟಿಸಿದ್ದೆವು.
ಆ ದಿನ ನಡೆದ ಪ್ರತಿಭಟನೆಯಲ್ಲಿ ಎಲ್ಲ ಸಮಾಜದ ಸಾರ್ವಜನಿಕರೂ, ಅಂಗಡಿಕಾರರು ಭಾಗವಹಿಸಿದ್ದರೂ ಸಹ ಪೊಲೀಸರು ಮತ್ತು ಜಿಲ್ಲಾಡಳಿತ ನಮ್ಮ ಸಮಾಜದ ಯುವಕರನ್ನೇ ಗುರಿಯಾಗಿಸಿ ಪ್ರಕರಣಗಳನ್ನು ದಾಖಲಿಸಿ, ನಮ್ಮ ಸಮಾಜದ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿರುವುದನ್ನು ಮನವಿಯಲ್ಲಿ ಖಂಡಿಸಿದ್ದಾರೆ. ಇದಲ್ಲದೆ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ನಾಮಧಾರಿ ಸಮಾಜದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.