ಜೀವನಾಡಿ ಮಿಡಿದು ನಡೆದ ವೈದ್ಯ ಎಂ. ಡಿ. ನಾಯ್ಕ
ಕುಮಟಾ : ಅರವತ್ತು ಎಪ್ಪತ್ತರ ದಶಕಗಳಿಂದಲೇ ಅತ್ಯಂತ ಜನಪ್ರಿಯ ವೈದ್ಯರಾಗಿ ಸಾರ್ವಜನಿಕ ಬದುಕಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಡಾ. ಎಂ. ಡಿ. ನಾಯ್ಕ ಕುಮಟಾದಲ್ಲಿ ಮೂರು ತಲೆ ಮಾರಿನವರಿಗೂ ಸುಪರಿಚಿತ ಹೆಸರು. ಅಂದಿನ ಕಾಲದಿಂದಲೂ ಪ್ರಸಿದ್ಧರೆನಿಸಿಕೊಂಡವರು ಡಾ. ಎಂ. ಡಿ. ನಾಯ್ಕ ಹಾಗೂ ಅವರ ಸಹಪಾಠಿ ಡಾ. ಟಿ. ಟಿ. ಹೆಗಡೆ ಮಾತ್ರ. ಇಬ್ಬರೂ ಒಬ್ಬರಿಗೊಬ್ಬರು ಪರಮಾಪ್ತರು. ಟಿ.ಟಿ ತೀವ್ರಗಾಮಿ ಮತ್ತು ಎಂ.ಡಿ. ಮಂದಗಾಮಿ ನಿಲುವಿನವರೆಂಬ ಅಭಿಪ್ರಾಯ ಜನಸಾಮಾನ್ಯರದ್ದು. ಬಹುಶಃ ಬಹುತೇಕ ಕುಟುಂಬಗಳ ವೈದ್ಯರಾಗಿ ಸದಾ ಸೇವೆ ನೀಡುತ್ತಿದ್ದ ಖ್ಯಾತಿ ಇವರಿಬ್ಬರಿಗೂ ಸಲ್ಲುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಡಾ. ಎಂ. ಡಿ. ನಾಯ್ಕ ಅವರು ಕುಮಟಾ ತಾಲ್ಲೂಕಿನಾದ್ಯಂತ ಎಲ್ಲ ಸಮಾಜದವರ ಪ್ರೀತಿಗೆ ಪಾತ್ರರಾಗಿ, ಸೇವೆಯೊಂದೇ ಪರಮಧ್ಯೇಯವೆಂದುಕೊಂಡು ಇಂದಿನವರೆಗೂ ವೃತ್ತಿ ಪಾವಿತ್ರ್ಯತೆ ಉಳಿಸಿಕೊಂಡಿರುತ್ತಾರೆ. ಬದುಕಿನುದ್ದಕ್ಕೂ ನಿಷ್ಕಪಟ, ನಿಷ್ಕಾಮ, ಅತಿ ಸರಳ, ಯೋಗಿಯಂತೆ ಬಾಳಿದವರು. ಅವರ ಜೀವಿತದ ಮೊದಲ ಭಾಗದಲ್ಲಿ ಅದರಲ್ಲೂ ನಾಮಧಾರಿ ವರ್ಗದವರಿಗೆ ಆರ್ಥಿಕ ಸಂಕಷ್ಟ ಹೇಳತೀರದ್ದಾಗಿತ್ತು. ಅಂತಹ ಹೊತ್ತಿನಲ್ಲಿ ಬಡಜನರಿಗೆ, ನಿರ್ಗತಿಕರಿಗೆ, ಊರಿಂದೂರಿಗೆ ಈಗಿನಂತೆ ಸುಲಭ ಸಂಪರ್ಕ ವ್ಯವಸ್ಥೆ ಇಲ್ಲದಿದ್ದಾಗಲೂ, ಜನರ ಬಳಿ ಧಾವಿಸಿ, ತುರ್ತು ಸೇವೆಗೈದು, ನಿಜವಾದ ಅರ್ಥದಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೃತ್ತಿಗೌರವಕ್ಕೆ ತಕ್ಕುದಾಗಿ ನಡೆದುಕೊಂಡು ಬಂದಿದ್ದರು. ಜೀವನದುದ್ದಕ್ಕೂ ಆದರ್ಶವನ್ನು ಪರಿಪಾಲಿಸಿಕೊಂಡು, ಯಾವುದೇ ಇಸಂಗೆ ಒಳಗಾಗದೇ, ನ್ಯಾಯಸಮ್ಮತವಾದ, ವಿಷಮತೆಯಿಲ್ಲದ ಜೀವನ ನಿರ್ವಹಣೆ ನಡೆಸಿದ ಸುಮನಸ್ಸು ಇವರದ್ದು.
ಬರಿಗೈಲಿ ಬಂದ ರೋಗಿಗಳಿಗೆ ಉಚಿತ ಚಿಕಿತ್ಸೆ ಜೊತೆಗೆ ಉಚಿತವಾಗಿ ಔಷಧಿಯನ್ನೂ ನೀಡಿ ಬಡರೋಗಿಗಳ ಪಾಲಿಗೆ ಸಾಕ್ಷಾತ್ ಭಗವಂತನಂತೆ ಅವತರಿಸಿ ಅಸ್ತಂಗತರಾದರು. ಈಗಲೂ ಉಪಕೃತರಾದ ಜನರು ಅವರ ಸ್ಮರಣೆ ಮಾತ್ರದಿಂದ ಧನ್ಯತಾ ಭಾವ ಹೊಂದಿ, ಅತ್ಯಂತ ಗೌರವಯುತವಾಗಿ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ವಿಧೇಯತೆ ತೋರುವುದು ಹೃದಯಂಗಮವಾದ ಸನ್ನಿವೇಶ. ಯಾರಾದರೂ ಹೊಗಳಿದಾಗ "ತಾನೊಬ್ಬ ಸಾಮಾನ್ಯ ಮನುಷ್ಯ! ಮನುಷ್ಯತ್ವದ ಕರ್ತವ್ಯ ಪಾಲಿಸುತ್ತಿದ್ದೇನೆಯೇ ವಿನಹ ಮತ್ತೇನಲ್ಲ" ಎಂದು ವಿನಮ್ರತೆಯಿಂದ ಬಾಗಿ ಆ ಭಗವಂತ ಕಡೆಗೆ ದೃಷ್ಠಿಹಾಯಿಸುವ ಪರಿಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ ಅವರ ಭಕ್ತಜನರು.
ಪ್ರಶಸ್ತಿ, ಸನ್ಮಾನ, ಹಾರ ತುರಾಯಿಗಳಿಂದ ದೂರವೇ ಇರುವ ಇವರು ರಾಜಕೀಯ ಪ್ರವೇಶಿಸುವಂತೆ ಅನೇಕ ಒತ್ತಡಗಳು ಬಂದಾಗಲೂ ಅದನ್ನು ನಯವಾಗಿ ತಿರಸ್ಕರಿಸುತ್ತಾ ತಮ್ಮ ವೃತ್ತಿ ಪ್ರವೃತ್ತಿಗಳಿಂದ ಸಂತೃಪ್ತಿ ಕಂಡುಕೊಂಡಿದ್ದರು. ಸಮಾಜ ಹಾಗೂ ಕುಟುಂಬದ ಸಾಮರಸ್ಯಕ್ಕೆ ತಾವು ಅನುಸರಿಸಿಕೊಂಡು ಬಂದ ನಡೆ ನುಡಿ ಸತ್ಯ ಪ್ರಾಮಾಣಿಕತೆಗಳಿಂದ ಎಂದಿಗೂ ವಿಚಲಿತಗೊಳ್ಳದೇ ದಿಟ್ಟ ಮತ್ತು ಗಟ್ಟಿ ಮನೋನಿಗ್ರಹದ ಪರಿಪಾಲಕರೆನಿಸಿದ್ದು ಅವರ ಬದುಕಿನ ಪ್ರಮುಖಾಂಶವಾಗುಳಿದಿವೆ.
ಕುಮಟಾ ಗುಡಿಗಾರಗಲ್ಲಿಯಲ್ಲಿ ಒಂದು ರೋಗ ನಿದಾನ ಕೇಂದ್ರ, ಆಸ್ಪತ್ರೆ ಮತ್ತು ಅದರೊಳಗಡೆಯೇ ಒಂದು ಪುಟ್ಟ ದೇವಸ್ಥಾನ. ಅದು " ಶ್ರೀ ರಮಣ ಕ್ಲಿನಿಕ್ " ಅದರ ಮುಖ್ಯಸ್ಥರಾಗಿದ್ದರು ಈ ದೇವಮಾನವ. ಬಡಬಗ್ಗರ, ದೀನದಲಿತರ, ಎಲ್ಲ ಸಮಾಜದ ಎಲ್ಲ ಸ್ತರಗಳ ಜನರ ಆರೋಗ್ಯ ಭಾಗ್ಯ ಕರುಣಿಸುವ ಇವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಶ್ರೀ ರಮಣ ಮಹರ್ಷಿಗಳ ಪರಮ ಭಕ್ತರು. ಆಧ್ಯಾತ್ಮಿಕ ಆಸಕ್ತಿ ವೈಜ್ಞಾನಿಕ ಚಿಂತನೆಗಳ ಜೊತೆಜೊತೆಗೇ ಬೆಸೆದು ಬಂದಿದ್ದು ಒಂದು ಅಪರೂಪದ ಮಾನವೀಯ ಗುಣ ಅವರಲ್ಲಿ ಮೇಳೈಸಿದ್ದು ವಿಶೇಷವಾದುದಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಉಪಚರಿಸಿ ತದನಂತರ ಧ್ಯಾನಮಗ್ನರಾಗಿ ಬಿಡುವ ಪ್ರಾರ್ಥನಾ ಸಂವಿತೆ ಅವರಲ್ಲಿ ಕಾಣದವರಿಲ್ಲ.
ನಾಮಧಾರಿ ಸಮಾಜ ಮುಖ್ಯ ವಾಹಿನಿಯಿಂದ ಮತ್ತು ಆರ್ಥಿಕತೆಯಿಂದ (ಐದಾರು ದಶಕಗಳ ಹಿಂದೆ) ತೀರ ಹಿಂದುಳಿದಿದ್ದನ್ನು ಮನಗಂಡು, ಶ್ರೀ ಎನ್. ಬಿ. ನಾಯ್ಕ ಕುಮಟಾದ ಜ್ಞಾನವಿಕಾಸ ಕೇಂದ್ರದ ಸಂಸ್ಥಾಪಕ ಮತ್ತು ಅಧ್ಯಾಪಕ ಅವರ ಜತೆಗೂಡಿ, " ನಾಮಧಾರಿ ವಿದ್ಯಾವರ್ಧಕ ಸಂಘ " ಹುಟ್ಟುಹಾಕಿ ಹಳ್ಳಿ ಹಳ್ಳಿಗೆ ಪ್ರತಿ ಭಾನುವಾರ ತೆರಳಿ ಸಮಾಜದ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಿಗೆ ಉಚಿತವಾಗಿ ಪಟ್ಟಿ, ಪೆನ್ನು ಮೊದಲಾದ ಕಲಿಕಾ ಸಾಮಗ್ರಿಗಳನ್ನು ನೀಡಿ ಕಲಿಕಾ ಪ್ರಜ್ಞೆ ಮೂಡಿಸುವಲ್ಲಿ ತೊಡಗಿಸಿಕೊಂಡ ಕ್ರಮ ಜನಮಾನಸದಲ್ಲಿ ನೆಲೆಯೂರಿದ್ದು ಐತಿಹಾಸಿಕವಾಗಿದೆ. ಇದೇ ನಂತರ ಕುಮಟಾದಲ್ಲಿ ನಾಮಧಾರಿ ಸಂಘದ ಅಸ್ತಿತ್ವಕ್ಕೆ ಕಾರಣವಾಯಿತೆನ್ನಬಹುದು. ಶ್ರೀಯುತರು ನಾಮಧಾರಿ ಸಂಘದ ಅಧ್ಯಕ್ಷತೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಅನೇಕ ಕಲ್ಯಾಣ ಯೋಜನೆಗಳಿಗೆ ಪೀಠಿಕೆ ಹಾಕಿದ್ದರು. ಇಲ್ಲಿಯ ನಾಮಧಾರಿ ಸಭಾಭವನ ಹಾಗೆಯೇ ಅದಕ್ಕೆ ಹೊಂದಿಕೊಂಡ ಶ್ರೀ ಲಕ್ಷ್ಮೀಸಹಿತ ವೆಂಕಟೇಶ್ವರ ದೇವರ ಪ್ರತಿಸ್ಠಾಪನೆಯಂತಹ ಮಂಗಳ ಕಾರ್ಯದಲ್ಲಿ ಮುಂದಾಳತ್ವ ವಹಿಸಿ ಸಮಾಜ ಬಾಂಧವರಿಗೆ ನಿಯತವಾಗಿ ಪ್ರೋತ್ಸಾಹ, ಮಾರ್ಗದರ್ಶನ ನೀಡುವಲ್ಲಿ ಮೇಲ್ಪಂಕ್ತಿ ವಹಿಸಿಕೊಂಡು ಬಂದ ಅಗ್ರಗಣ್ಯ ನಾಯಕರೆನಿಸಿದ್ದರು. ಸಮಾಜಾಭಿವೃದ್ಧಿಯಲ್ಲಿ ಡಾಕ್ಟರರು ಬೀರಿದ ಪ್ರಭಾವ ಯಾವತ್ತೂ ಅನುಕರಣೀಯವೆನಿಸಿದೆ.
ಡಾ.ಎಂ. ಡಿ. ನಾಯ್ಕ, ಹಂದಿಗೋಣದ ಶ್ರೀ ಕೆ. ಪಿ. ಭಟ್ಟ, ಡಾ. ಆರ್. ಎಂ. ಮಾಸೂರಕರ, ದಿ. ಯು. ಎಸ್. ಚಂದಾವರಕರ ಅವರ ಸಮೂಹತ್ವದಲ್ಲಿ ಸುಮಾರು 45 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದ " ಶ್ರೀ ರಮಣ ಸೇವಾ ಸಂಘ " ವು ಭಗವಾನ್ ಶ್ರೀ ರಮಣ ಮಹಶ್ರೀಗಳ ತತ್ವ ಸಿದ್ಧಾಂತಗಳನ್ನು ಇಂದಿಗೂ ಪ್ರಚುರಪಡಿಸಿಕೊಂಡು ಬರುತ್ತಿದೆ. ಈ ಸೇವಾ ಸಂಘವು ಜನ್ಮತಾಳಲು ಇಲ್ಲಿಯ ಹತ್ತಿರದ ವಾಲಗಳ್ಳಿಯಲ್ಲಿ ಕೆಲವರ್ಷ ವಾಸವಾಗಿದ್ದ ಪೂಜ್ಯ ಶ್ರೀ ರಾಮೇಶ್ವರ ಸ್ವಾಮಿಗಳು ಕಾರಣಿಕರ್ತರು. ಅವರ ಬಹುದಿನಗಳ ಬಯಕೆ ಈಡೇರಿ ಇಂದು ಕುಮಟಾದಲ್ಲಿ ರಮಣೇಶ್ವರ ದೇವಸ್ಥಾನ ಅದ್ಭುತವಾಗಿ ತಲೆಎತ್ತಿ ನಿಂತು ರಮಣ ಭಕ್ತರಿಗೆ ಆಸರೆಯಾಗಿದೆ.
ರಮಣ ಮಹರ್ಷಿಗಳ ತತ್ವ-ವಿಚಾರಗಳ ಬಗ್ಗೆ ಪ್ರತಿವರ್ಷವೂ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಭಗವಾನರ ಉಪದೇಶಗಳನ್ನು ಆಸ್ತಿಕ ಭಜಕರಿಗೆ ಮಾಡಿಕೊಡಲಾಗುತ್ತದೆ. ಡಾ. ಎಂ. ಡಿ. ನಾಯ್ಕರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ' ರಮಣ ಸಂದೇಶ ' ಎಂಬ ತ್ರೈಮಾಸಿಕ ಪತ್ರಿಕೆ ತನ್ನದೇ ಆದ ವಿಶಿಷ್ಠತೆ ಹಾಗು ಓದುಗರನ್ನು ಹೊಂದಿದೆ.
ಸ್ವಾಮಿ ಪ್ರಣವಾನಂದರ ಸಂಪಾದಿತ ಗ್ರಂಥಗಳು ಕೂಡ ಇಲ್ಲಿಯ ರಮಣ ಸೇವಾ ಸಂಘದಿಂದ ಪ್ರಕಟಗೊಂಡಿರುವುದು ಉಲ್ಲೇಖನೀಯವಾಗಿದೆ. ಇಂಗ್ಲೆಂಡಿನ ಆರ್ಥರ್ ಒಸ್ಬೋರ್ನ ಬರೆದ " ರಮಣ ಮಹರ್ಷಿ ಎಂಡ್ ಪಾತ್ ಆಫ್ ಸೆಲ್ಫ್ ನೋಲೇಜ್ " ಎಂಬ ಪುಸ್ತಕವನ್ನು " ಭಗವಾನ್ ಶ್ರೀ ರಮಣ ಮಹರ್ಷಿ ಮತ್ತು ಆತ್ಮಜ್ಞಾನದ ಮಾರ್ಗ " ಎಂದು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇದನ್ನು ಇಲ್ಲಿಯ ಗಜಾನನ ಮುದ್ರಣಾಲಯದಲ್ಲಿ ಮುದ್ರಿಸಿ ಪ್ರಕಟಿಸಿದ್ದು ಅವರಿಗಿರುವ ಸಾಹಿತ್ಯ ಜ್ಞಾನವನ್ನೂ ದೃಢೀಕರಿಸುತ್ತದೆ.
ಡಾಕ್ಟರರ ಧರ್ಮಪತ್ನಿ ಕುಸುಮಾ ಕೂಡ ಕರುಣಾಳು, ಸಹೃದಯಿ ಮಾತೃ ಸ್ವರೂಪಿಣಿ. ಹಿರಿಯ ಮಗ ಪ್ರಭಾಕರ ವೈದ್ಯರಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಎರಡನೆಯ ಮಗ ಪ್ರಕಾಶ ರಮಣ ಮೆಡಕಲ್ಸ್ ನಡೆಸಿಕೊಂಡು ಬರುತ್ತಿದ್ದಾರೆ. ಮಗಳು ವಿಜಯಾ ಹಾಗೂ ರಂಜನಾ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ.
" ಇಂತಹ ತಂದೆಯನ್ನು ಪಡೆದ ತಾನೇ ಮಹಾ ಪುಣ್ಯವಂತ, ಭಾಗ್ಯವಂತ. ಇದರ ಹೊರತು ತಾನೇನೂ ತಂದೆಯ ಬಗ್ಗೆ ನುಡಿಯಲಾರೆ " ಎಂದು ವಿನಮ್ರವಾಗಿ ನುಡಿಯುವ ಮಗ ಪ್ರಕಾಶ ಭಾವುಕರಾಗಿ ಬಿಡುತ್ತಾರೆ.
ನಿಸ್ಸಂದೇಹವಾಗಿ ಎಲ್ಲ ಸಮಾಜದವರೊಡನೆ ಅವಿನಾಭಾವ ಸಂಬಂಧ, ಪ್ರೀತಿ, ಅಭಿಮಾನದ ಒಸುಗೆ ಹೊಂದಿರುವ ಡಾ. ಎಂ. ಡಿ. ನಾಯ್ಕ ರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರಬೇಕೆಂಬ ತುಡಿತ ನನ್ನಂತಹ ನೂರಾರು ಜನರು ಅವರು ಬದುಕಿದ್ದಾಗ ವ್ಯಕ್ತಪಡಿಸಿದಾಗ ಅವೆಲ್ಲ ತನಗೆ ತಕ್ಕುದಲ್ಲ ಎಂದು ಅಭಿಪ್ರಾಯಪಟ್ಟಿದ್ದು ಆ ಕಾರಣಕ್ಕಾಗಿಯೇ ನನ್ನಂತವರು ಮುಂದಾಗದಿದ್ದುದು ವಿಷಾದದ ಸಂಗತಿ. ಈಗಲಾದರೂ ನಾವು ಅವರ ಬದುಕಿನ ಕುರಿತಾದ ಹೊತ್ತಿಗೆಯೊಂದನ್ನು ದಾಖಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ನನಗನಿಸುತ್ತದೆ. ಬೆಂಗಳೂರಿನ ನಾಮಧಾರಿ ನ್ಯೂಸ್ ಪ್ರಕಟಿಸುವ ಈ ಲೇಖನ ಅದಕ್ಕೊಂದು ವೇದಿಕೆ ಒದಗಿಸಿಕೊಡಲೆಂಬ ಮಹದಾಸೆ ನನ್ನದು. ಈ ಆಸೆ ಈಡೇರಲೆಂಬ ಅಮಿತ ಆಶಯದೊಂದಿಗೆ ತಮ್ಮ ಪ್ರತಿಕ್ರಿಯೆಗಾಗಿ ಕಾದಿರುವೆ.
ಮಕ್ಕಳು ಮೊಮ್ಮಕ್ಕಳ ಜತೆ ರಮಣರ ಆರಾಧನೆಯೊಂದಿಗೆ ತಮ್ಮ ಇಳಿವಯಸ್ಸನ್ನು ಆನಂದಿಸುತ್ತಿರುವ ಡಾ. ಎಂ. ಡಿ. ನಾಯ್ಕ ಅವರು ಇಷ್ಟು ಬೇಗ ತಮ್ಮ 82 ನೇ ವಯಸ್ಸಿನಲ್ಲಿ (7 ಮೇ 2017) ನಮ್ಮನ್ನೆಲ್ಲಾ ಅಗಲಿ ಬಿಡುತ್ತಾರೆಂಬ ಸಣ್ಣ ಸಂಶಯ ಕೂಡ ಬಾರದ ರೀತಿಯಲ್ಲಿ ನಿಧನರಾಗಿದ್ದಾರೆನ್ನುವ ವಿಷಯ ತಿಳಿದು ಅವಕ್ಕಾದ ದುಃಖತಪ್ತ ಅವರ ಸಾವಿರ ಸಾವಿರ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಪುನೀತರಾದರು. ಅಂದು ಅಂತಿಮ ಯಾತ್ರೆಯಲ್ಲಿ ಅವರನ್ನು ಬೀಳ್ಕೊಡಲು ಮೆರವಣಿಗೆಯಲ್ಲಿ ಸಾಗರೋಪಾದಿಯಲ್ಲಿ ಸೇರಿದ ಕುಮಟಿಗರು ತಮ್ಮ ತಮ್ಮ ಬದುಕಿಗೆ ಆಶ್ರಯದಾತರಾದ ಡಾಕ್ಟರರಿಗೆ ಒಬ್ಬರಿಂದೊಬ್ಬರು ಒಬ್ಬರಿಗೊಬ್ಬರು ನುಡಿನಮನ ಸಲ್ಲಿಸಿದ್ದು ಇಲ್ಲಿಯ ಎಲ್ಲರ ಮನೆ ಮನದಲ್ಲಿ ಚಿರಸ್ಥಾನಪಡೆದಿದೆ. ಅವರೆಂದೂ ಅಜರಾಮರರು!
- ಎನ್. ಆರ್. ಗಜು, ಕುಮಟಾ
______________________________________
ಕಿರು ಪರಿಚಯ : ಎನ್.ಆರ್.ಗಜು

- ವೃತ್ತಿಯಿಂದ ಕುಮಟಾದ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ಕಾರ್ಯಭಾರ ಮಾಡುತ್ತಿರುವುದು. ಕನ್ನಡ ಸಾಹಿತ್ಯ ಪರಿಷತ್ತು ಕುಮಟಾ ಘಟಕದ ಅಧ್ಯಕ್ಷರಾಗಿ ಕನ್ನಡ ಕಟ್ಟುವ ಕಾರ್ಯದಲ್ಲಿ ಸಾಧನೆ. ಕುಮಟಾ ರೋಟರಿ ಕ್ಲಬ್ ಕಾರ್ಯದರ್ಶಿಯಾಗಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವುದು. ರೋಟರಿ ಕ್ಲಬ್ನಧ ಮಾಸಿಕ ಪತ್ರಿಕೆ ' ರೋಟೋಲೈಟ್ 'ನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವುದು.
- ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ 35 ವರ್ಷಗಳಿಂದ ಸೇವೆ. ರೋಟರಿ ಕ್ಲಬ್, ಭಾರತೀಯ ಕುಟುಂಬ ಯೋಜನೆ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಭಾರತ ವಿಕಾಸ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ, ಪದಾಧಿಕಾರಿಯಾಗಿ ಸಕ್ರೀಯ. ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಕೋಶಾಧ್ಯಕ್ಷನಾಗಿ ಕಾರ್ಯ.
- ಸಾಹಿತ್ಯ ಪ್ರಾಕಾರಗಳಲ್ಲೂ ಆಸಕ್ತಿ, ' ತೊನೆದ ಜೀವ ' ಎಂಬ ಕಾದಂಬರಿ, ಅಂಕಣ ಬರಹ, ' ಮಗು-ಮೊಗ್ಗು ' ಪ್ರಕಟವಾಗಿದೆ. ಅನೇಕ ಕಥೆ, ಕವನಗಳು ನಿಯತಕಾಲಿಕೆಗಳಲ್ಲಿ ಆಗಾಗ ಬೆಳಕು ಪ್ರಕಟಗೊಳ್ಳುತ್ತಿವೆ. ' ಭರವಸೆ ' ಎಂಬ ಕವನ ಸಂಕಲನ ಡಿಜಿಟಲ್ ಪ್ರತಿ. ಉದಯವಾಣಿ ಪತ್ರಿಕೆಗೆ ಅಂಕಣ ಬರಹ. ' ಶಿವಾನಂದ ' ಎಂಬ ಸಾಹಿತಿ ಶ್ರೀ ಬಿ.ಪಿ.ಶಿವಾನಂದ ರಾವ್ ಅವರ ಬದುಕು ಬರಹಗಳ ಹೊತ್ತಿಗೆಯ ಪ್ರಕಾಶಕ, ' ಶರದ್ದಶತಮ್ ' ಎಂಬ ಗಿಬ್ ಹೈಸ್ಕೂಲಿನ ಶತಮಾನೋತ್ಸವ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿ ಸದಸ್ಯ, ಕುಮಟಾ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಮರಣ ಸಂಚಿಕೆ, 'ಗಂಧದ ಗುಡಿ' ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸಂಚಿಕೆ ' ಕುಂಭಿನಿ ' ಯ ಸಂಪಾದನೆ ಮತ್ತು ಪ್ರಕಟಣೆ.
- ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡಿದ ' ಜನಮೆಚ್ಚಿದ ಶಿಕ್ಷಕ ಪ್ರಶಸಿ, ' ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ', ಉತ್ತಮ ವಿಜ್ಞಾನ ಸಂಘಟಕ ಪ್ರಶಸ್ತಿ, ಶ್ರೀ ಶಿವಕುಮಾರ ಸ್ವಾಮೀಜಿಯವರಿಂದ ಶಿಕ್ಷಣ ಜ್ಞಾನ ಮಾಸ ಪತ್ರಿಕೆ ಕೊಡಮಾಡಿದ ' ಜ್ಞಾನ ಸಿಂಧು ' ಪ್ರಶಸ್ತಿ. ರೋಟರಿ, ಲಯನ್ಸ ಮೊದಲಾದ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ. ಶಿಕ್ಷಣ ಇಲಾಖೆಯ ಗಣಿತ ಮತ್ತು ವಿಜ್ಞಾನ ವಿಷಯಗಳ ಮೇಲೆ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಕಾರ್ಯಾಗಾರ ನಡೆಸಿಕೊಟ್ಟ ಅನುಭವ.