ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ಬೆಂಗಳೂರು : ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯನ್ನು ದಿನಾಂಕ 06-09-2017 ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಮದ್ಯಾಹ್ನ 04:00 ರಿಂದ ಶುರುವಾಗುವ ಕಾರ್ಯಕ್ರಮಗಳು ಕಬ್ಬನ್ ಪಾರ್ಕನ ಕೆಂಪೇಗೌಡ ಗೋಪುರದಿಂದ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಹೊರಟು ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ತಲುಪಲಿದೆ. ಸಂಜೆ 06:00 ಗಂಟೆಯ ನಂತರ ಮುಂದಿನ ಕಾರ್ಯಕ್ರಮಗಳನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುತ್ತದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ಉಮಾಶ್ರೀ ಮಾಡಲಿದ್ದು, ಮುಖ್ಯಅತಿಥಿಗಳಾಗಿ ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್, ರಾಜ್ಯ ಸರ್ಕಾರದ ಸಚಿವರಾದ ಶ್ರೀ ಕೆ.ಜೆ.ಜಾರ್ಜ್, ಶ್ರೀ ಕಾಗೋಡು ತಿಮ್ಮಪ್ಪ, ಶ್ರೀ ಬಿ. ರಮಾನಾಥ ರೈ, ಬೆಂಗಳೂರಿನ ಮೇಯರ್ ಶ್ರೀಮತಿ ಜಿ.ಪದ್ಮಾವತಿ ಹಾಗೂ ಪುತ್ತೂರಿನ ಶಾಸಕಿ ಶ್ರೀಮತಿ ಶಾಕುಂತಲ ಟಿ. ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಶ್ರೀ ಆರ್.ವಿ.ದೇವರಾಜ್ ವಹಿಸಲಿದ್ದಾರೆ.
ಜಾನಪದ ಕಲಾತಂಡದಲ್ಲಿ ಭಜನೆ, ಚಂಡೆ ವಾದನ, ಕಂಸಾಳೆ, ಡೊಳ್ಳು ಕುಣಿತ ಸಂಬಳ ವಾದನ, ಪಟ ಕುಣಿತ, ಗೊರವರ ಕುಣಿತ ಇತ್ಯಾದಿ ಇರಲಿದೆ. ಈ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆದಿದ್ದು ರಾಜ್ಯ ಆರ್ಯ ಈಡಿಗ ಸಂಘ, ಬಿಲ್ಲವರ ಸಂಘ ಮತ್ತು ನಾಮಧಾರಿ ಸಂಘದ ಪದಾಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಸಮುದಾಯದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಾಮಧಾರಿ ಸಂಘದ ಕಾರ್ಯದರ್ಶಿಗಳಾದ ಶ್ರೀ ಡಿ.ಕೆ.ನಾಯಕರವರು ಹಾಗೂ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ವೇದಮೂರ್ತಿಯವರು ಮನವಿಮಾಡಿದ್ದಾರೆ.