ಮರೆಯದ ಮಾಣಿಕ್ಯ: ಮುಠ್ಠಳ್ಳಿಯ ಮಾಸ್ತಪ್ಪ ಮಂಜಪ್ಪ ನಾಯ್ಕ
ಭಟ್ಕಳ : ಒಬ್ಬ ಅನಕ್ಷರಸ್ಥ ಸಜ್ಜನಿಕೆಯ ಮನುಷ್ಯ ಹೇಗೆ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಬಲ್ಲ ಎಂಬುದಕ್ಕೆ ಭಟ್ಕಳದ ಮುಂಡಳ್ಳಿಯಲ್ಲಿ 1919 ರಲ್ಲಿ ಜನಿಸಿ ಮುಠ್ಠಳ್ಳಿಯಲ್ಲಿ ನೆಲೆಸಿ ಸಾಮಾಜಿಕ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತನ್ನು ಮೂಡಿಸಿದ ಮಾಸ್ತಪ್ಪ ಮಂಜಪ್ಪ ನಾಯ್ಕ ಸಾಕ್ಷಿಯಾಗಿ ನಿಲ್ಲುತ್ತಾರೆ. ಈಗ್ಗೆ ಐದಾರು ವರ್ಷಗಳಿಂದೀಚೆ (ಜೂನ್ 2, 2011) ಕಣ್ಮರೆಯಾದ ಹಳೆ ತಲೆಮಾರಿನ ಕೊಂಡಿಯಂತಿದ್ದ ಮಾಸ್ತಪ್ಪ ನಾಯ್ಕರ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿಗಳು ಈಗಲೂ ನಿಬ್ಬೆರಗಾಗಿ ಅವರ ಬದುಕನ್ನು ಸ್ಮರಿಸಿಕೊಳ್ಳುತ್ತಾರೆ. ರಾಜಕೀಯ ಎಂದೆಂದಿಗೂ ನಮ್ಮದಲ್ಲ ಎಂದಂದುಕೊಂಡ ಹೊತ್ತಿನಲ್ಲಿದ್ದಂತವರಿಗೆ ಆಳುವ ಪ್ರವೃತ್ತಿ ಮೈಗೂಡಿಸಿಕೊಳ್ಳಲೂ ಎಂಟೆದೆ ಬೇಕು. ಅದು ಅವರಲ್ಲಿತ್ತು!
ರೈತಾಬಿ ಬಡ ಕೃಷಿಕ ಕುಟುಂಬದಿಂದ ಬಂದ ಮಾಸ್ತಪ್ಪಣ್ಣ ಬದುಕಿನುದ್ದಕ್ಕೂ ಒಳ್ಳೆಯ ಹೆಸರಿಟ್ಟುಕೊಂಡಿದ್ದಲ್ಲದೇ, ಅಂದಿನ ರಾಜಕೀಯ ಧುರೀಣರು ಇವರನ್ನು ಬಲ್ಲವರಾಗಿದ್ದು ಅತಿ ಹತ್ತಿರವಾಗಿಸಿಕೊಂಡಿದ್ದರು. ಸತ್ಯ ಪ್ರಾಮಾಣಿಕತೆಯನ್ನೇ ಉಸಿರಾಡುತ್ತಾ ಯಾವೊಬ್ಬ ಗಾಡ್ ಫಾದರ್ ಇಲ್ಲದ ಒಬ್ಬ ಯುವಕ ಒಂದರ್ಥದಲ್ಲಿ ರಾಜಕೀಯ ಸೇರಿ ಸಾಧನೆಗಿಳಿದಿದ್ದು ದೊಡ್ಡ ಕೌತುಕವೇ ಆಗಿದೆ. ಅಂದಿನ ಶಾಸಕ ಸಮಸುದ್ಧೀನ್ ಜುಕಾಖೋ ರಾಜಕೀಯ ಸ್ನೇಹ ಹಸ್ತ ಚಾಚಿದ್ದರು. ಇದರಿಂದ ಪ್ರೇರೇಪಿತರಾಗಿ ಅಂದು ರಾಮಕೃಷ್ಣ ಹೆಗಡೆ ಹಾಗೂ ಬಂಗಾರಪ್ಪನವರ ಆಡಳಿತಾವಧಿಯಲ್ಲಿ ಅನೇಕ ಜನಹಿತ ಕಾರ್ಯಗಳಿಗೆ ಇವರಿಂದ ಭದ್ರ ನೆಲೆಗಟ್ಟು ಒದಗಿತೆನ್ನಬಹುದು. ಅಕ್ಷರದ ಅರಿವಿರದಿದ್ದರೂ ರಾಜಕೀಯ ಆಡಳಿತದ ಮಹತ್ತರ ಸಮಿತಿಗಳಲ್ಲಿ ಆಯ್ಕೆಯಾಗಿ ನ್ಯಾಯ ಒದಗಿಸುವ ಕಾರ್ಯವೆಸಗಿದ್ದರು. ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಎ.ಪಿ.ಎಂ.ಸಿ. ಸದಸ್ಯ, ಮಂಡಳ ಪಂಚಾಯತ ಅಧ್ಯಕ್ಷರಾಗಿ ಸುದೀರ್ಘ ಅವಧಿಯವರೆಗೆ ಜನಸ್ಪಂದನ ನಡೆಸಿದ ಕೀರ್ತಿವಂತರಾದರು.
ಭಟ್ಕಳ ತಾಲ್ಲೂಕಿನಲ್ಲಿ ಬ್ಯಾಂಕುಗಳ ಹಾಗೂ ದೇವಸ್ಥಾನಗಳ ಸ್ಥಾಪನೆಯಲ್ಲಿ ಮಾಸ್ತಪ್ಪ ನಾಯ್ಕರ ಪಾತ್ರ ಎಲ್ಲಕ್ಕಿಂತ ಹಿರಿದು ಮತ್ತು ಮಹತ್ವದ್ದು. ತಾಲ್ಲೂಕಿನಲ್ಲಿಯೇ ಹೆಸರಾಂತ ಬ್ಯಾಂಕ್ ಪಿ.ಎಲ್.ಡಿ. ಯ ಸಂಸ್ಥಾಪಕರಲ್ಲಿ ಇವರೂ ಒಬ್ಬರಾಗಿದ್ದರು. ಜನತಾ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕರೂ ಅದರ ನಿರ್ದೇಶಕರೂ ಅಗಿದ್ದರು. ಚಿತ್ರಾಪುರ ಟೈಲ್ಸ್ ಲಿಮಿಟೆಡ್ನತ ಸ್ಥಾಪಕರೂ ಅದರ ಏಳಿಗೆಗಾಗಿ ಅಪಾರ ಶ್ರಮವಹಿಸಿದ್ದನ್ನು ನೆನಪಿಸಿಕೊಳ್ಳದೇ ಇರಲಾಗದು. ಗುರು ಸುಧೀಂದ್ರ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬೇರೆ ಬೇರೆ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಮುಖಂಡತ್ವವಹಿಸಿಕೊಂಡಿದ್ದು ಇರುತ್ತದೆ. ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಧರ್ಮದರ್ಶಿ ಹಾಗೂ ನಾಮಧಾರಿ ಸಮಾಜದ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಸಮಾಜ ಬಾಂಧವರೊಂದಿಗೆ ಸಮಾಜ ಪರಿವರ್ತನೆಗಾಗಿ ಹೊಸಹೊಸ ಬತ್ತಳಿಕೆ ಬಳಸಿ ಬಾಣ ಪ್ರಯೋಗಿಸಿದ್ದು ಸರ್ವವಿಧಿತ. ಯಾವುದೇ ಗಲಭೆ, ವ್ಯಾಜ್ಯ, ದೋಂಬಿಗಳಲ್ಲಿ ಕೋರ್ಟ ಮೆಟ್ಟಲೇರದೇ ತಾವೇ ಮುಂದೆ ನಿಂತು ನ್ಯಾಯ ನಿರ್ಣಯ ನೀಡುತ್ತಿದ್ದುದು ಹಳೆಯ ಕಾಲದ ಸಿನೇಮಾದ ಹೀರೋನ ವರಸೆಯನ್ನು ನೆನಪಿಸುವಂತಿದೆ ಈಗ ಕಥೆ ಕೇಳುವ ನನ್ನಂಥವನಿಗೆ!
ಚನ್ನಪಟ್ಟಣದ ಹನುಮಂತ ದೇವಸ್ಥಾನದ ಧರ್ಮದರ್ಶಿ ಹಾಗೂ ಅಧ್ಯಕ್ಷರಾಗಿ ತಮ್ಮ ಜೀವತಾವಧಿಯ ತನಕವೂ ಸೇವೆಸಲ್ಲಿಸಿದ್ದಾರೆ. ಇತ್ತೀಚೆಗೆ ಹೆಚ್ಚಿನ ನಾಮಧಾರಿ ಹುಡುಗರು ಹಿಂದೂ ಧರ್ಮದ ಪರವಾಗಿ ದನಿ ಎತ್ತುತ್ತಿರುವುದು ಕಂಡಷ್ಟೇ ಆಗಲೇ ಹಿಂದೂ ಧರ್ಮದ ರಕ್ಷಣೆಗಾಗಿ ಮಾಸ್ತಪ್ಪಣ್ಣ ಟೊಂಕಕಟ್ಟಿ ನಿಂತಿದ್ದರೆಂದು ತಿಳಿದು ಬರುತ್ತದೆ. ಭಟ್ಕಳ ಮಾರಿಕಾಂಬಾ ದೇವಸ್ಥಾನದ ನಿರ್ಮಾಣ ಸಂದರ್ಭದಲ್ಲಿಯೂ ಅನೇಕ ಕಾಲೆಳೆಯುವ ಪ್ರವೃತ್ತಿ ಜನರ ನಡುವೆಯೂ ದೇವಸ್ಥಾನದ ನಿರ್ಮಾಣದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದರು. ಭಟ್ಕಳದ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಶ್ರೀ ಕಠವೀರ ದೇವಸ್ಥಾನ ಮಕ್ಕಿಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ಥಾಪಕರೂ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿ ಅಪಾರ ಸೇವೆಸಲ್ಲಿಸಿದ್ದಾರೆ.
ತಮ್ಮ ಸಂಪರ್ಕದಲ್ಲಿ ಅನೇಕ ರಾಜಕೀಯ ಮುಖಂಡರೊಡನೆ ಆತ್ಮೀಯತೆ ಹೊಂದಿದ್ದು ಆ ಪ್ರಭಾವದಿಂದ ಅತ್ಯುಪಯುಕ್ತ ಕಾರ್ಯಸಾಧನೆ ಮಾಡಿದ ಹಿರಿಮೆ ಅವರದ್ದಾಗಿತ್ತು. ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಸಮಶುದ್ಧೀನ ಜುಕಾಖೊ, ಎಸ್.ಎಂ.ಯಾಹ್ಯಾ, ಆರ್.ಎಲ್.ಜಾಲಪ್ಪ, ಆರ್.ವಿ.ದೇಶಪಾಂಡೆ, ಆರ್.ಎನ್.ನಾಯ್ಕ, ಶಿವಾನಂದ ನಾಯ್ಕರಂತಹ ಪ್ರಮುಖರ ಸ್ನೇಹ ಸಹಕಾರದಿಂದ ಭಟ್ಕಳದ ಅಭಿವೃದ್ಧಿಗೆ ಪಣತೊಟ್ಟವರಂತೆ ಪರಿಶ್ರಮಿಸಿದ್ದು ಈಗ ಇತಿಹಾಸದ ಪುಟ ಸೇರಿದೆ. ಹಿಂದೊಮ್ಮೆ, 1993 ರಲ್ಲಿ ಹಿಂದೂ-ಮುಸ್ಲಿಂ ಕಲಹದ ಸಂದರ್ಭದಲ್ಲಿ ಬಾಂಧವ್ಯ ಬೆಸೆಯುವಲ್ಲಿ ವಹಿಸಿದ ನೇತೃತ್ವ ನಿಜನಾಯಕನ ವ್ಯಕ್ತಿತ್ವ ಪ್ರದರ್ಶಿತವಾಗಿತ್ತು. ಎಲ್ಲ ಜಾತಿ, ಧರ್ಮದವರ ಗೌರವಾದರಗಳಿಗೆ ಪಕ್ಕಾದ ಮಾಸ್ತಪ್ಪನವರನ್ನು ಜಾತಿ ಜನ&