logo logo

ಮೌಢ್ಯಗಳ ಮನಸ್ಸಿಗೆ ಮಸಿ ಬಡಿದ ಚರ್ಮಾಯಿ

ಅಂಕೋಲ : ವ್ಯಕ್ತಿಗತ ಮನಸ್ಥಿತಿಗಳು ಬದಲಾವಣೆಯತ್ತ ಹಾತೊರೆದರೂ ಜಾತಿಯತೆ, ಸಂಪ್ರದಾಯ, ಹುಸಿ ಪ್ರತಿಷ್ಟೆ ಮತ್ತು ಮೌಢ್ಯಗಳಿಂದ ಜಡಗಟ್ಟಿರುವ ಸಾಮಾಜಿಕ ಮನಸ್ಥಿತಿಯು ಚೌಕಟ್ಟನ್ನು ಬಿಗಿತವನ್ನು ಕಾದುಕೊಳ್ಳುವುದು ಸಾಮಾನ್ಯ.
ಪ್ರಕೃತಿಯ ಚಿತ್ರಣಗಳು ಮತ್ತು ಸಮಾಜದ ರೂಪಕಗಳೆರಡೂ ಚಾರ್ಮಯಿಯ ಸನ್ನಿವೇಶ ಮತ್ತು ಸಂಗತಿಗಳನ್ನು ಕಟ್ಟಿಕೊಡುವಲ್ಲಿ ಸಶಕ್ತವಾಗಿದೆ. ಮಿಗಿಲಾಗಿ ಸ್ಥಳೀಯ ನಡವಳಿಕೆಗಳ, ರೂಢಿಗಳ ಮತ್ತು ಭಾಷೆಗಳ ಸೊಗಡು ಸಕಾರ ಅಥವಾ ನಕಾರಾತ್ಮಕವಾಗಿ ತನ್ನ ಛಾಯೆ ಬೀರುತ್ತಿದ್ದರೂ ಅದನ್ನು ಉಳಿಸಿಕೊಂಡಿರುವ ಲೇಖಕನ ದೇಸೀ ಪ್ರೇಮಕ್ಕೆ ಇಡೀ ಕಾದಂಬರಿ ಪೂರ್ತಿ ಸಾಕ್ಷಿಯಾಗಿದೆ.
ನಗರ ಜೀವನದ ಪ್ರಭಾವಿಸುವಿಕೆಯಲ್ಲಿ ಗ್ರಾಮ್ಯ ಬದುಕಿನ ವಿವರಗಳು ಲಘುವಾಗುತ್ತಾ ಶಿಥಿಲವಾಗುತ್ತಾ ಹೋಗುವ ಕಾಲಘಟ್ಟದಲ್ಲಿ ಕರಾವಳಿಯ ಮುಗ್ಧತೆ ಮತ್ತು ಮೌಢ್ಯತೆಯ ಸೌಂದರ್ಯ ಮತ್ತು ಕ್ರೌರ್ಯಗಳೆರಡೂ ಅನಾವರಣಗೊಳ್ಳುತ್ತದೆ.
ಚರ್ಮಾಯಿಯಲ್ಲಿ ಲೇಖಕ ಚಿತ್ರಣವನ್ನು ಕಟ್ಟಿಕೊಡುವ ಶಕ್ತಿಯ ಪರಿಚಯವಾಗುವುದು ಪ್ರಕೃತಿಯ ವಿದ್ಯಮಾನಗಳನ್ನು ಮಾನವ ನಡವಳಿಕೆಗಳಿಗೆ ಆರೋಪಿಸುತ್ತಾ ಸರಾಗವಾಗಿ ಕಥೆಯನ್ನು ನಿರೂಪಿಸುತ್ತಾ ಹೋಗುವುದರ ಮೂಲಕ.
ಸ್ಥಳೀಯ ಪದಗಳ ಬಳಕೆಯು ಅನ್ಯ ಪ್ರಾದೇಶಿಕರಿಗೆ ಅಪರಿಚಿತವಾದರೂ ನಿರೂಪಣೆಯ ಭಾಗವಾಗಿರುವುದರಿಂದ ಅರ್ಥೈಸಿಕೊಳ್ಳಲು ತೊಡಕಾಗದೇ, ಓದುವಿಕೆಯ ಗಾಢತೆಯನ್ನು ಹೆಚ್ಚಿಸುವುದು ಮತ್ತು ಕರಾವಳಿ ಪ್ರದೇಶದ ದೇಸಿ ಸೊಗಡನ್ನು ಆಘ್ರಾಣಿಸುವಂತೆ ಮಾಡುತ್ತದೆ.
ನಿಮ್ಮ ವರ್ಗವೋ ಅಥವಾ ನಿಮ್ಮ ಮನಸ್ಥಿತಿಯೋ, ಒಟ್ಟಾರೆ ಒಂದು ಬಗೆಯ ಜನರು ಸಮಾಜದಿಂದ ಅವಗಣನೆಗೆ ಒಳಗಾಗಿರುವುದು ಅಂತಿರಲಿ, ಅದರ ಪರಿಣಾಮವೋ ಏನೋ ಎಂಬಂತೆ ತನ್ನ ಕಾಲಿನ ಹುಣ್ಣನ್ನೂ ಗಮನಿಸಿಕೊಳ್ಳದೇ ಅದರಲ್ಲಿ ಕೀವು ಕಟ್ಟಿ ನೊಣಗಳನ್ನು ಆಹ್ವಾನಿಸುವಷ್ಟರ ಮಟ್ಟಿಗೆ ತಮ್ಮನ್ನು ತಾವೇ ಗಮನಿಕೊಳ್ಳದೇ ಇರುವಂತಹ ಪಾತ್ರಗಳು ಮನಕಲಕುವುದೂ ಹೌದು, ಗಮನ ಸೆಳೆಯುವುದೂ ನಿಜ. ಇಂತಹ ಪಾತ್ರದ ಸೂಕ್ಷ್ಮತೆಗಳು, ಪಾತ್ರಗಳನ್ನು ಕಾಡುವ ಸೂಕ್ಷ್ಮತೆಗಳು ಕಾದಂಬರಿಯುದ್ದಕ್ಕೂ ಇವೆ.
ಕೆಲವೊಮ್ಮೆ ಪ್ರಾದೇಶಿಕ ವಿವರಣೆಗಳು ನಿರೂಪಣೆಯ ಭಾಗವಾಗಿ ನಿಂತರೆ, ಕೆಲವೊಮ್ಮೆ ಪರಿಚಯಾತ್ಮಕವಾಗಿ ನಿಂತು ಕಥೆಯನ್ನು ಮುಂದುವರಿಸುವಂತೆ ತೋರುತ್ತದೆ. ಒಟ್ಟಾರೆ ನಿರೂಪಣಾ ಕೌಶಲ್ಯವು ತನ್ನ ಇತಿಮಿತಿಗಳಲ್ಲಿ ಭರವಸೆಯನ್ನಂತೂ ನೀಡುತ್ತದೆ.
ಗೊಡ್ಡು ಸಾಮಾಜಿಕ ಗೀಳುಗಳಲ್ಲಿ ತನ್ನ ತಾನು ಬಂಧಿಸಿಕೊಂಡಿರುವಂತಹ ಮನುಷ್ಯನ ಕ್ರೌರ್ಯ ಓದುಗನ ಬೆಚ್ಚಿ ಬೀಳಿಸುತ್ತಾ ಹೋದರೆ, ಲೇಖಕನ ಕಾಳಜಿ ಮತ್ತು ವಸ್ತುನಿಷ್ಟತೆ ಅವನ ಅಂತಃಕರಣದ ಮುಖವನ್ನು ತೋರುತ್ತಾಬರುತ್ತದೆ.
ಪಾತ್ರಗಳ ಮೈ ಮೇಲಿನ ಉಡುಪು ಮತ್ತು ಒಡವೆಗಳಿಂದ ಹಿಡಿದು, ಚರ್ಮ ಮತ್ತು ಬಟ್ಟೆಗಳಿಗೆ ಹತ್ತಿರುವ ಕೊಳೆಯೂ ಕೂಡಾ ವಸ್ತುಸ್ಥಿತಿಯ ನಿರೂಪಣೆಯ ಭಾಗವಾಗಿರುವುದು ಕಾದಂಬರಿಯ ವಿಶೇಷ ಎಂದು ನನಗೆ ತೋರಿತು. ಇಂತಹ ಸೂಕ್ಷ್ಮ ವಿವೇಚನೆಗಳಿಂದಲೇ ಕಥನ ಕಲೆಯು ವಿಷಯವನ್ನು, ಕಾಳಜಿಯನ್ನು ದಾಟಿಸುವಲ್ಲಿ ಗೆಲ್ಲುವುದು ಎಂಬುದೂ ಕೂಡ ಸ್ಪಷ್ಟ. ಕಾದಂಬರಿಯಲ್ಲಿ ಬರುವ ಋತುಚಕ್ರದ ವಿಷಯ ಹಾಗೆ ಸುಮಕೇತು,ಪರಿಧಿ ಮತ್ತು ಕೈವಲ್ಯಳಂತ ಪಾತ್ರಗಳು ಮನಸ್ಸನ್ನ ಗಟ್ಟಿಯಾಗಿ ಕಾಡುತ್ತದೆ.
ಈ ದಿಕ್ಕಿನಲ್ಲಿ ಸೂಕ್ಷ್ಮ ಸಂವೇದನೆಯಿಂದ ಕೂಡಿರುವ ವಿಷಯಗಳನ್ನು ಕಥನದ ಮೂಲಕ ಅನಾವರಣ ಮಾಡ ಹೊರಟಿರುವ ಆಡ್ಲೂರು ರಾಜು ಅಷ್ಟೇ ಅವರಿಗೆ ಅಭಿನಂದನೆಗಳು.

@ಯೋಗೀಶ್ ಮಾಸ್ತರ್, ಸಾಹಿತಿ

ನಾಮಧಾರಿ ರುಚಿ

MORE RECIPE...

ಬ್ಲಾಗ್