ಶಿರಾಲಿಯ ನಾಮಧಾರಿ ಮಿತ್ರ ಬಳಗದಿಂದ ಅರ್ಥಪೂರ್ಣ ವನ ಮಹೋತ್ಸವ ಆಚರಣೆ
ಭಟ್ಕಳ : ಇದೇ ಜೂನ್ 5 ರ ವಿಶ್ವ ಪರಿಸರ ದಿನದಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯ ನಾಮಧಾರಿ ಮಿತ್ರ ಬಳಗವು ಆಯೋಜಿಸಿದ *ವನ ಮಹೋತ್ಸವ* ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗ್ರತೆ ಉಪನ್ಯಾಸದ ಜೊತೆಗೆ ವಿವಿಧ ತಳಿಯ ಸಸಿಗಳನ್ನು ನೆಡುವದರ ಮೂಲಕ 'ಮನೆಗೊಂದು ಮರ ಊರಿಗೊಂದು ವನ' ಎನ್ನುವುದು ಎಲ್ಲರ ಮನದಲ್ಲಿ ಮೂಡುವ ಹಾಗೆ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಕಾರ್ಯಕ್ರಮವು ಮೊದಲಿಗೆ ಶಿರಾಲಿ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನ ಹರಕಲಿ ಇದರ ಆವರಣದಲ್ಲಿ ಆರಂಭವಾಗಿ ನಂತರ ಸರಕಾರಿ ಪ್ರಾಥಮಿಕ ಶಾಲೆ ಬಪ್ಪನಕೊಡ್ಲು ನಲ್ಲಿ ಜರುಗಿತು ನಂತರ ಮುಂದುವರೆದು ಕೋಟೆಬಾಗಿಲನ ಜಟಕ (ದೇವರ ಗುಡಿ) ಮನೆಯ ಗುಡ್ಡದ ಭಾಗಗಳಲ್ಲಿ ಕೂಡ ಸಸಿಗಳನ್ನು ನೆಡಲಾಯಿತು.
ತದನಂತರ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲಾ ಮಿತ್ರ ಬಳಗದ ಸದಸ್ಯರಿಗೆ, ಸ್ಥಳೀಯರಿಗೆ, ಮಹಿಳಾ ಸಂಘದ ಸದಸ್ಯರಿಗೆ ತಲಾ ಒಂದೊಂದು ಸಸಿಯನ್ನು ನೀಡಿ ಮನೆಯ ಆವರಣದಲ್ಲಿ ನೆಡೆಲು ಮನವಿಮಾಡಿಕೊಳ್ಳಲಾಯಿತು, ಈ ಮೂಲಕ ಮುಂದೊಂದು ದಿನ ಮರ, ಗಿಡಗಳಿಲ್ಲದೆ ಕಹಿ ಅನುಭವ ಆಗದಿರಲಿ ಎಂದು ಜಾಗ್ರತೆಯ ನಿಮಿತ್ತ ಎಲ್ಲರಲ್ಲಿಯು ಸಿಹಿ ಹಂಚಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳು, ಊರಿನ ಸ್ಥಳೀಯರು, ಮಹಿಳಾ ಸಂಘಗಳು ಕೈ ಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರೆಂದು ತಿಳಿಸಲು ಸಂತೋಷವಾಗುತ್ತದೆ ಎಂದು ನಾಮಧಾರಿ ಮಿತ್ರ ಬಳಗದ ಕಾರ್ಯದರ್ಶಿಗಳಾದ ಶ್ರೀ ದಾಸ ನಾಯ್ಕ, ಹರಕಲಿ ಯವರು ತಿಳಿಸಿದರು. ನಾಮಧಾರಿ ಮಿತ್ರ ಬಳಗದ ಅಧ್ಯಕ್ಷರು ರಾಜೀವ ನಾಯ್ಕ ಅಳ್ವೇಕೂಡಿ, ಉಪಾಧ್ಯಕ್ಷರು ಸುರೇಶ ನಾಯ್ಕ ಹುಲ್ಲುಕಿ,, ಹಾಗೆ ಉಳಿದ ಸದಸ್ಯರು ಉಪಸ್ಥಿತಿತರಿದ್ದರು, ಉಪನ್ಯಾಸ ಕಾರ್ಯಕ್ರಮವನ್ನು ಮೋಹನ ನಾಯ್ಕ ಚಿತ್ರಾಪುರ ನಡೆಸಿಕೊಟ್ಟರು.
ಮಿತ್ರ ಬಳಗದ ಸದಸ್ಯರ ಪರಿಶ್ರಮದಿಂದ ಸಮಾಜದಲ್ಲಿ ನಡೆಯುವ ಅತ್ಯಂತ ಮಹತ್ವದ ಕಾರ್ಯಕ್ರಮಗಳಲ್ಲೊಂದಾದ ವನ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಹಾಗೂ ಪರಿಸರದ ಬಗ್ಗೆ ತಮಗಿರುವ ಕಳಕಳಿ ಮತ್ತು ಕಾಳಜಿಯನ್ನು ಎತ್ತಿ ಹಿಡಿದಿದ್ದಾರೆ.