ಅಂಕೋಲಾ ಬಂಡಿಹಬ್ಬ ಮತ್ತು ಕೋಳಿ ಕುರಿ ಅದ್ದೂರಿಯಾಗಿ ನೆರವೇರಿತು
ಅಂಕೋಲ : ನಿನ್ನೆ ಸಂಜೆ ಅಂಕೋಲಾ ಬಂಡಿಹಬ್ಬ ಅದ್ದೂರಿಯಾಗಿ ನೆರವೇರಿತು. ಹನ್ನೆರಡು ದಿನಗಳ ಕಾಲ ನಡೆಯುವ ಈ ಹಬ್ಬ ತುಂಬಾ ವಿಶೇಷತೆಗಳಿಂದ ಕೂಡಿದೆ. ಈ ಹನ್ನೆರಡು ದಿನಗಳಲ್ಲಿ ಪ್ರತಿದಿನ ಸಂಜೆ ದೇವರ ಕಳಸ ಹೊತ್ತು ಗುನಗರು ಊರ ಪ್ರದೀಕ್ಷಿಣೆ ಮಾಡುವರು. ಈ ಕಳಸದ ರಕ್ಷಣೆಗೆ ಇನ್ನುಳಿದ ಗುನಗರು ಬೆತ್ತ ಹಿಡಿದು ಈ ಕಳಸದ ಮುಂದೆ ಮೆರವಣಿಗೆಯಲ್ಲಿ ಸಾಗುವುದು ಪ್ರತೀತಿ. ಈ ಮೆರವಣಿಗೆಗೆ ಮನೆಮನೆಯಲ್ಲಿ ತೋರಣದೊಂದಿಗೆ ಆರತಿ ಕೊಡಲಾಗುತ್ತದೆ. ವಿಶೇಷ ಅಂದರೆ ಬೆತ್ತ ಹಿಡಿಯುವರಲ್ಲಿ ನಾಮಧಾರಿ ಸಮುಧಾಯದ ಗುನಗರು ಕೂಡ ಒಬ್ಬರು ಇರುವುದು. ಹೀಗೆ ಎಲ್ಲ ಸಮುದಾಯದವರೂ ಈ ಬಂಡಿಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಕೊನೆಯ ದಿನವಾದ ನಿನ್ನೆ ಕಳಸವನ್ನು ಬಂಡಿಕಟ್ಟೆಯಲ್ಲಿರುವ ಬಂಡಿಯಲ್ಲಿ ಕೂರಿಸಿ ಪೂರ್ತಿ ಒಂದು ಸುತ್ತು ತಿರುಗಿಸಲಾಯಿತು. ಈ ಕಾರಣದಿಂದ ಇದನ್ನು ಬಂಡಿಹಬ್ಬ ಎಂದು ಕರೆಯುತ್ತಾರೆ. ನಿನ್ನೆ 10 ರಂದು ಬಂಡಿಹಬ್ಬ ಮತ್ತು 11 ರಂದು ಅಂದರೆ ಇಂದು "ಕೋಳಿ ಕುರಿ" ಆಚರಿಸಲಾಗುವುದು. ಕೋಳಿ ಕುರಿ ಅಂದರೆ ಇಂದು ದೇವರಿಗೆ ಕೋಳಿ ಮತ್ತು ಕುರಿಯ ಬಲಿ ಕೊಟ್ಟು ಬಳಿಕ ಇಡೀ ಊರಿನಲ್ಲಿ ಮಾಂಸದೂಟ ಮಾಡುವುದು ಪ್ರತೀತಿ.
ಉತ್ತರ ಕನ್ನಡದ ವಿಶೇಷತೆಗಳಲ್ಲಿ ಅಂಕೋಲದ ಬಂಡಿಹಬ್ಬ ಪ್ರಮುಖ ಸ್ಥಾನ ಪಡೆಯುತ್ತದೆ.