ಗಂಗಾವಳಿ ನಾಮಧಾರಿ ಸಮಾಜದ ಸುಗ್ಗಿ ವಿಶೇಷ
ಕುಮಟಾ : ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮದ ನಾಮಧಾರಿ ಸಮಾಜದ ಸುಗ್ಗಿ ಕೋಲಾಟ ಒಂದು ವಿಶೇಷ ಸಂಪ್ರದಾಯ. ಆಧುನಿಕತೆಯ ಸೋಗು ಹಾಗೂ ವಿದೇಶಿಯರ ಅಂಧಾನುಕರಣೆಯ ಮಧ್ಯೆಯೂ ಗಂಗಾವಳಿಯ ನಾಮಧಾರಿಗಳು ಜಾನಪದ ಕೋಲಾಟದೊಂದಿಗೆ ಸುಗ್ಗಿ ಆಚರಣೆ ಆಚರಿಸುತ್ತಿರುವುದು ನಾಡಿನ ಹಿರಿಮೆಯಾಗಿದೆ.
ಗೋಕರ್ಣ ಮಂಡಲ ಶ್ರೀ ಮಹಾಬಲೇಶ್ವರನ ಕ್ಷೇತ್ರವಾಗಿರುವುದರಿಂದ ಈ ಭಾಗದ ಜನತೆ ನಮ್ಮ ಸನಾತನ ಪರಂಪರೆಯಂತೆ ಯುಗಾದಿಯನ್ನು ಹೊಸ ವರ್ಷವೆಂದು ಅಚರಿಸಿದ ನಂತರ ಪ್ರಥಮ ಹಬ್ಬವಾಗಿ ಸುಗ್ಗಿ ಆಚರಿಸುವುದರಿಂದ ಈ ಸುಗ್ಗಿಯನ್ನು " ಹಿರಿಸುಗ್ಗಿ " ಎಂದು ಕರೆಯುತ್ತಾರೆ.
ಗೋಕರ್ಣ ಸೀಮೆಯಲ್ಲಿ ಹಾಲಕ್ಕಿ, ನಾಮಧಾರಿ, ಖಾರ್ವಿ, ಪಟಗಾರ ಸಮಾಜದವರು ಸುಗ್ಗಿಯನ್ನು ಆಚರಿಸುತ್ತ ಬಂದಿದ್ದರೂ ಇತ್ತೀಚೆಗೆ ಎಲ್ಲವೂ ಮಾಯವಾಗಿ ಹಾಲಕ್ಕಿಗಳು ಮತ್ತು ನಾಮಧಾರಿಗಳು ಮಾತ್ರ ಈ ಸಂಪ್ರದಾಯವನ್ನು ರಕ್ಷಿಸಿಕೊಂಡು ಬಂದಿರುವುದು ಒಂದು ವಿಶೇಷ. ಅದರಲ್ಲೂ ಗಂಗಾವಳಿಯ ನಾಮಧಾರಿಗಳ ಸುಗ್ಗಿಯೆಂದರೆ ಈ ಭಾಗದ ಜನ ಪುಳಕಿತಗೊಳ್ಳುತ್ತಾರೆ. ನಾಮಧಾರಿಗಳ ಜಾನಪದ ಹಾಡು ಹಾಗೂ ವಿಶೇಷ ಶೈಲಿಯ ಕೋಲಾಟ ನೋಡುಗರ ಕಣ್ಮನ ಸೆಳೆಯುತ್ತದೆ.
ಹೊಸ ಸಂವತ್ಸರದ ಪ್ರಾರಂಭದ ದಿನವೇ ಊರಿನ ಮಂಡದಮನೆಯಲ್ಲಿ ಕೋಲಿಗೆ ಹೂವನ್ನು ಹಾಕುವುದರೊಂದಿಗೆ ಹಬ್ಬದ ಪ್ರಾರಂಭವಾಗುತ್ತದೆ. ತದನಂತರ ಗ್ರಾಮದ ಅಧಿದೇವತೆಯಾದ ಶ್ರೀ ಶಾಂತಿಕಾ ಪರಮೇಶ್ವರಿ ಮತ್ತು ಪರಿವಾರ ದೇವರುಗಳಲ್ಲಿ ಮೊದಲು ಸಾಂಪ್ರದಾಯಿಕ ಕೋಲನ್ನು ಆಡಿ ನಂತರ ಊರಿನ ಮೊಕ್ತೇಸರ, ಮೇತ್ರಿ, ಕೋಲುಕಾರ ಹೀಗೆ ಪ್ರಮುಖ ಕುಟುಂಬಗಳ ಮನೆಯಲ್ಲಿ ಕೋಲನ್ನು ಆಡಿ ನಂತರ ಆಮಂತ್ರಿಸಿದ ಉಳಿದೆಲ್ಲ ಸಮಾಜದ ಮನೆಗಳಲ್ಲಿ ಜಾನಪದ ಹಾಡುಗಳನ್ನು ಹೇಳುತ್ತಾ ಕೋಲಾಟ ಆಡುತ್ತಾರೆ. ಹೀಗೆ ಏಳೆಂಟು ದಿನಗಳವರೆಗೆ ಈ ಸುಗ್ಗಿತಂಡ ಊರಿನ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಸಂಚರಿಸುವುದರಿಂದ ಊರಿಗೆ ವಿಶೇಷ ಕಳೆ ಕಟ್ಟುತ್ತದೆ.
ಬೆಂಡು-ಬೇಗಡೆಗಳಿಂದ ತಯಾರಿಸಿದ ತುರಾಯಿಯೊಂದಿಗೆ ವಿಶೇಷ ವೇಶಭೂಷಣಗಳಿಂದ ಕಂಗೊಳಿಸುವ ಈ ತಂಡದೊಂದಿಗೆ ಕರಡಿ ವೇಶ, ಯಕ್ಷಗಾನದ ವಿವಿಧ ವೇಶಗಳು, ದೊರೆ, ಮಡ್ಡಮ್ಮ(ಮೇಡಮ್) ಇನ್ನಿತರೇ ಪಾತ್ರಗಳು ತಂಡಕ್ಕೆ ವಿಶೇಷ ಮೆರಗನ್ನು ನೀಡುತ್ತವೆ. ಹಾಗೆಯೇ ಇವರು ಹಾಡುವ ಹಾಡು ಸಹ ವಿಶೇಷವಾಗಿದ್ದು, ಸಮಾಜದ ಎಡರು-ತೊಡರನ್ನು ತಿದ್ದುವ ಮತ್ತು ಯುವ ಜನಾಂಗವನ್ನು ನೈತಿಕತೆಯ ನೆಲಗಟ್ಟಿನಲ್ಲಿ ಸಾಗಿಸುವ ಸಂದೇಶವನ್ನು ನೀಡುತ್ತವೆ. ಹಾಗೂ
ಹಾಸ್ಯವೂ ಅಡಗಿರುತ್ತದೆ. ಹಾಗೂ ಇವರ ವಿಶೇಷ ಶೈಲಿಯ ಕೋಲಾಟವಂತೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಜೊತೆಗೆ ಸಾಂಪ್ರದಾಯಿಕ ವಾದ್ಯಗಳಾದ ಗುಮ್ಮಟೆ, ಡೋಲು, ತಾಳ, ಜಾಗಟೆ ವಾದ್ಯಗಳು ಕೋಲಿನೊಂದಿಗೆ ಮೇಳೈಸುತ್ತದೆ. ನಾಮಧಾರಿಗಳ ಸುಗ್ಗಿ ಇದೆ ಎಂದರೆ ಸಾಕು, ಪರ ಊರಿನಲ್ಲಿ ಕೆಲಸಕಾರ್ಯಗಳಲ್ಲಿ ತೊಡಗಿದವರೂ ಸಹ ಊರಿಗೆ ಆಗಮಿಸಿ ಈ ಅಂದವನ್ನು ಕಣ್ಮನ ತುಂಬಿಕೊಳ್ಳುತ್ತಾರೆ.
ಈ ಸಂಪ್ರದಾಯವನ್ನು ಪರಂಪರಾಗತ ಊರಿನ ಮಂಡದ ಮನೆಯವರು, ಮೇತ್ರಿ, ಕೋಲುಕಾರ ಮತ್ತು ಗುನಗರ ಮನೆಯವರ ಮುಂದಾಳತ್ವದಲ್ಲಿ ಊರಿನ ಸಮಾಜದ ಎಲ್ಲರೂ ಭಾಗವಹಿಸಿ ಆಚರಿಸುತ್ತಾರೆ. ಹಾಗೂ ಯುವಕರೂ ಸಹ ಅತ್ಯುತ್ಸಾಹದಿಂದ ಭಾಗವಹಿಸುತ್ತಿರುವುದರಿಂದ ಈ ಸುಗ್ಗಿ ಇನ್ನಷ್ಟು ರಂಗೇರುತ್ತದೆ.
ಈ ಹಬ್ಬವು ಯುಗಾದಿಯಿಂದ ಪ್ರಾರಂಭವಾಗಿ ದವನದ ಹುಣ್ಣಿಮೆಯವರೆಗೆ ಸಾಗುತ್ತದೆ. ಹುಣ್ಣಿಮೆಯ ಮರುದಿನ ಸಮಾಜದ ಎಲ್ಲರ ಮನೆಗಳಿಗೂ ಈ ತಂಡ ಸಂಚರಿಸಿ, ಹಾಡನ್ನು ಹೇಳುತ್ತಾ ಕೋಲಾಟ ಆಡಿ ಕೊನೆಯಲ್ಲಿ ಮಂಡದಮನೆಯಲ್ಲಿ ಸೇರುತ್ತದೆ. ಮಂಡದಮನೆಯಲ್ಲಿ ಸಾಂಪ್ರದಾಯಿಕ ಎಲ್ಲ ಹಾಡುಗಳನ್ನೂ ಹೇಳುತ್ತ ಎಲ್ಲ ಶೈಲಿಯ ಕೋಲನ್ನು ಆಡುತ್ತದೆ. ಈ ಕೋಲಾಟವನ್ನು ನೋಡಲು ಊರಿನ ಜನ ಮಂಡದಮನೆಯಲ್ಲಿ ಜಾತ್ರೆಯಂತೆ ಜಮಾಯಿಸುತ್ತಾರೆ. ಕೊನೆಗೆ ಸಾಂಪ್ರದಾಯಿಕ ಜಾಗಡಿಪದ್ಯ ಮತ್ತು ಮಂಗಲಪದ್ಯವನ್ನು ಹೇಳಿ ಕೋಲಾಟವನ್ನು ಸಮಾಪ್ತಿಗೊಳಿಸಲಾಗುತ್ತದೆ. ನಂತರ ತುರಾಯಿಕಡ್ಡಿಗಳನ್ನು ಹಿಡಿದು ಗಂಗಾವಳಿಯ ನದಿ ತಟಕ್ಕೆ ಸಾಗಿ ನದಿಸ್ನಾನ ಮಾಡದ ನಂತರ ನದಿತಟದಲ್ಲಿರುವ ಕರಿದೇವರಿಗೆ ಪೂಜೆ ಸಲ್ಲಿಸಿ ತಮ್ಮತಮ್ಮ ಮನೆಗಳಿಗೆ ಸಾಗುತ್ತಾರೆ. ಹಬ್ಬದ ದಿನ ಮನೆಯಲ್ಲಿ ನೆಂಟರಿಷ್ಟರು ಆಗಮಿಸಿರುವುದರಿಂದ ಭಾರಿಭೋಜನ ಸಿದ್ಧಗೊಂಡಿರುತ್ತದೆ.
ಹೀಗೆ ಎಲ್ಲರನ್ನೂ ಸೆಳೆಯುವ ಈ ಜಾನಪದ ಕಲೆ ಸ್ನೇಹ, ಸಹಬಾಳ್ವೆ, ಏಕತೆ, ಸೌಹಾರ್ಧತೆಗೆ ಸಾಕ್ಷಿಯಾಗುವುದರೊಂದಿಗೆ ಎಲ್ಲರೊಂದಿಗೂ ಮಧುರ ಭಾಂಧವ್ಯವನ್ನು ಬೆಸೆಯಲು ಸಹಕಾರಿಯಾಗಿದೆ.
ವರದಿ: ಶ್ರೀ ಮಂಜುನಾಥ ಆರ್. ನಾಯ್ಕ, ಗಂಗಾವಳಿ,