ಹೈಕೋರ್ಟ್‌ನ ಹಿರಿಯ ವಕೀಲರು ಹಾಗೂ ಆಧುನಿಕ ರೈತರಾದ ನಾಗೇಂದ್ರ ನಾಯ್ಕ
ಬೆಂಗಳೂರು : ಬಹುತೇಕ ನಾಮಧಾರಿ ಸಮಾಜದವರಿಗೆ ಚಿರಪರಿಚಿತ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾದ ಶ್ರೀ ಆರ್. ನಾಗೇಂದ್ರ ನಾಯ್ಕ ಅವರು, ಸುಮಾರು 32 ವರ್ಷಗಳಿಗೂ ಅಧಿಕ ವಕೀಲ ವೃತ್ತಿಯ ಅನುಭವ ಹೊಂದಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ದವರಾದ ಅವರು, ಬೆಂಗಳೂರಿನಲ್ಲಿ ತಮ್ಮ ಕಾನೂನು ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಹೆಸರುವಾಸಿಯಾಗಿ, ಸಮಾಜಸೇವೆ ಹಾಗೂ ಜನಪರ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದಾರೆ.
ಅವರು RNN Legal ಸಂಸ್ಥೆಯ ಸಂಸ್ಥಾಪಕರಾಗಿದ್ದು, ಕ್ರಿಮಿನಲ್ ಕಾನೂನು, ಸಾಂವಿಧಾನಿಕ ಮತ್ತು ರಿಟ್ ಅರ್ಜಿಗಳು, ಸೇವಾ ಮತ್ತು ಕಾರ್ಮಿಕ ಕಾನೂನು, ಭೂಮಿ ಹಾಗೂ ಅರಣ್ಯ ಕಾನೂನು, ವಾಣಿಜ್ಯ ಮತ್ತು ಕಾರ್ಪೊರೇಟ್ ವ್ಯಾಜ್ಯಗಳು, ಕುಟುಂಬ ಹಾಗೂ ಆಸ್ತಿ ಸಂಬಂಧಿತ ಪ್ರಕರಣಗಳಲ್ಲಿ ವಿಶಿಷ್ಟ ಪರಿಣತಿಯನ್ನು ಹೊಂದಿದ್ದಾರೆ. ಅವರು ಕೇಂದ್ರ ತನಿಖಾ ದಳ (CBI) ಪರ ವಕೀಲರಾಗಿ ಕಾರ್ಯನಿರ್ವಹಿಸಿ ಅನೇಕ ಮಹತ್ವದ ಪ್ರಕರಣಗಳಲ್ಲಿ ಯಶಸ್ವಿಯಾಗಿ ವಾದ ಮಂಡಿಸಿದ್ದಾರೆ.
ಅವರ ನಿಷ್ಪಕ್ಷಪಾತತೆ, ಪ್ರಾಮಾಣಿಕತೆ ಹಾಗೂ ಕಾನೂನು ಕ್ಷೇತ್ರದಲ್ಲಿನ ಅಸಾಧಾರಣ ಸಾಧನೆಯನ್ನು ಗುರುತಿಸಿ, ಭಾರತದ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು 2019, 2021 (ಎರಡು ಬಾರಿ) ಹಾಗೂ 2023ರಲ್ಲಿ ಒಟ್ಟು ನಾಲ್ಕು ಬಾರಿ ಶಿಫಾರಸು ಮಾಡಿತ್ತು. ಇದು ಅವರ ಪ್ರತಿಭೆ ಮತ್ತು ಅರ್ಹತೆಗೆ ದೊರೆತ ಅತ್ಯುನ್ನತ ಗೌರವವಾಗಿದೆ. ಹಲವು ಬಾರಿ ಶಿಫಾರಸು ಪುನರುಚ್ಚರಿಸಲ್ಪಟ್ಟಿದ್ದರೂ ನೇಮಕಾತಿ ಅಧಿಸೂಚನೆ ಹೊರಬರದೆ, ಸುಮಾರು ನಾಲ್ಕು ವರ್ಷಗಳ ನಿರೀಕ್ಷೆಯ ಬಳಿಕ ಅವರು 2023ರಲ್ಲಿ ತಮ್ಮ ಸಮ್ಮತಿಯನ್ನು ಹಿಂತೆಗೆದುಕೊಂಡರು. ಈ ಘಟನೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು.
ವೃತ್ತಿ ಜೀವನದ ಜೊತೆಗೆ ಸಮಾಜಮುಖಿ ಸೇವೆಯಲ್ಲಿಯೂ ಅವರು ಮುಂಚೂಣಿಯಲ್ಲಿದ್ದಾರೆ. ಭಟ್ಕಳದ BOLTSTART ACADEMY ಸಾರ್ವಜನಿಕ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿಯಾಗಿ ಗ್ರಾಮೀಣ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಕೌಶಲ್ಯಾಭಿವೃದ್ಧಿ, ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗೋದ್ಯಮದ ಅವಕಾಶಗಳನ್ನು ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಬಡವರು, ರೈತರು, ವಿಧವೆಯರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು ನೀಡುವ ಮೂಲಕ ಸಮಾಜದ ವಿಶ್ವಾಸವನ್ನು ಗಳಿಸಿದ್ದಾರೆ.

ನ್ಯಾಯಾಂಗ ವಿಭಾಗದಲ್ಲಿ ಉನ್ನತ ಸ್ಥಾನಮಾನ ಗಳಿಸಿದ್ದರೂ ಕೂಡ ನಾಗೇಂದ್ರ ಅವರು ಬೇಸಾಯದ ಬಗ್ಗೆ ವಿಶೇಷ ಆಸಕ್ತಿ, ಅದರಲ್ಲೂ ಹೂವನ್ನು ಬೆಳೆಸುವ ವಿನೂತನ ಪದ್ಧತಿ ಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದು, ಅದರಲ್ಲಿಯೂ ಸಾಕಷ್ಟು ಯಶಸ್ಸನ್ನು ಕೂಡ ಕಂಡಿದ್ದಾರೆ. ಕೆಲಸದ ನಿಮಿತ್ತ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೂಡ ಬೆಂಗಳೂರಿನಲ್ಲಿಯೇ 10 ಎಕರೆ ಕೃಷಿ ಭೂಮಿಯನ್ನು ಆಧುನಿಕ ರೀತಿಯಲ್ಲಿ ವ್ಯವಸ್ಥಿತವಾಗಿ ಸಿದ್ಧಗೊಳಿಸಿ, ಕೇವಲ ಮಳೆ ನೀರನ್ನು ಶೇಖರಿಸಿ ಈ ರೀತಿ ಮಳೆ ನೀರಿನ ಕೊಯ್ಲುನಿಂದ (Rainwater harvesting) ಸಂಪೂರ್ಣ ಬೇಸಾಯ ಪದ್ಧತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು ವಕೀಲರಿಗಷ್ಟೇ ಅಲ್ಲದೇ, ರೈತರಿಗೂ ಮಾದರಿಯಾಗಿದ್ದಾರೆ.
ಅವರು RNN Farms Private Limited ಸಂಸ್ಥೆಯ ನಿರ್ದೇಶಕರಾಗಿದ್ದು, ಆಧುನಿಕ ಹೂಗಾರಿಕೆ ಹಾಗೂ ತೋಟಗಾರಿಕೆಯಲ್ಲಿ ಯಶಸ್ಸು ಹೊಂದಿದ್ದಾರೆ. ನೆದರ್ಲ್ಯಾಂಡ್ಸ್, ಫ್ರಾನ್ಸ್, ಸ್ಪೇನ್, ಪೋರ್ಚುಗಲ್, ಟರ್ಕಿ, ವಿಯೆಟ್ನಾಂ ಹಾಗೂ ಕೊಲಂಬಿಯಾ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ ಆಧುನಿಕ ಕೃಷಿ ಮತ್ತು ಹೂಗಾರಿಕೆಯ ತಂತ್ರಜ್ಞಾನವನ್ನು ಅಧ್ಯಯನ ಮಾಡಿದ್ದಾರೆ.

ಶ್ರೀಯುತ ಆರ್. ನಾಗೇಂದ್ರ ನಾಯ್ಕ ಅವರು ನ್ಯಾಯ, ನಿಷ್ಠೆ, ಪ್ರಾಮಾಣಿಕತೆ, ಸಮಾಜಸೇವೆ ಹಾಗೂ ವೃತ್ತಿಪರ ಶ್ರೇಷ್ಠತೆಯ ಪ್ರತೀಕವಾಗಿದ್ದು, ಯುವ ಪೀಳಿಗೆಗೆ ಆದರ್ಶವಾಗಿದ್ದಾರೆ. ಅವರಿಗೆ ದೇವರು ಉತ್ತಮ ಆರೋಗ್ಯ-ಆಯುಷ್ಯ ಕೊಟ್ಟು, ದೇಶಕ್ಕೆ ಹಾಗೂ ನಮ್ಮ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡುವ ಶಕ್ತಿ ನೀಡಲಿ ಎಂದು ನಾಮಧಾರಿ.ಕಾಂ ವತಿಯಿಂದ ಶುಭಹಾರೈಕೆ.