ನಾಮಧಾರಿ.ಕಾಂ ನ ಸ್ಪೂರ್ತಿ ಕೇಶವ ಡಿ. ನಾಯ್ಕ
ಅಂಕೋಲ : ನಿವೃತ್ತ ಸರ್ಕಾರಿ ಅಧಿಕಾರಿ ಕವಿ ತೆಂಕಣಕೇರಿಯ ಕೇಶವ ಡಿ. ನಾಯ್ಕ ಅವರು 08 ನವೆಂಬರ್ 2022ರ ಮಂಗಳವಾರ ಬೆಳಿಗ್ಗೆ 10:30ಗೆ ಬೆಂಗಳೂರಿನ ಜಿಎಂ ಆಸ್ಪತ್ರೆಯಲ್ಲಿ ಸ್ವರ್ಗಸ್ಥರಾದರೂ ಎಂದು ತಿಳಿಸಲು ವಿಷಾದಿಸುತ್ತೇವೆ. ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕವನ ಬರೆಯುವ ಹವ್ಯಾಸವನ್ನು ಯೌವನದಿಂದಲೇ ಬೆಳೆಸಿಕೊಂಡು ಸೊಗಸಾದ ನೂರಾರು ಕವನ ರಚಿಸುವ ಮೂಲಕ ಉತ್ತಮ ಕವಿ ಎನಿಸಿಕೊಂಡಿದ್ದ ಕೆ. ಡಿ. ನಾಯ್ಕ ಅವರು ತೆಂಕಣಗಾಳಿ, ಪಡುವಣ ಕಡಲು ಹಾಗೂ ಅಂಕೋಲೆ ಅಲೆ ಎಂಬ ಮೂರು ಶ್ರೇಷ್ಠ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕನಸಿನ ಲೋಕದ ನಾಲ್ಕನೇ ಕವನ ಸಂಕಲನ ಪ್ರಕಟಣೆ ಗೊಳ್ಳುವ ಮೊದಲೇ ಅವರು ಇಹಲೋಕ ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವುಂಟುಮಾಡಿದೆ. ತಮ್ಮ ಮೂಲಕ ನೂರಾರು ಬಡ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದರು.
ಅವರು ನಾಮಧಾರಿ ಸಮುದಾಯದ ಸಂಘಟನೆಗೆಂದು ನಿರ್ಮಿಸಲಾದ naamadhaari.com ಹಾಗೆಯೇ, ಸಮಾಜದ ವಧುವರ ಅನ್ವೇಷಣೆಗೆಂದು ಸಂಸ್ಥಾಪನೆಗೆ matrimony.naamadhaari.com ನಿರ್ಮಾಣಕ್ಕೆ ಪ್ರಮುಖ ಸ್ಪೂರ್ತಿ ಯಾಗಿದ್ದರು.
ನಾಮಧಾರಿ ಸಮಾಜದ ಬಗ್ಗೆ ಅಪಾರ ಅಭಿಮಾನ, ಕಾಳಜಿ ಹೊಂದಿದ್ದ ಕೆ,ಡಿ,ನಾಯ್ಕ ಅವರು ಯಾವುದೇ ವೇದಿಕೆ ಅಥವಾ ಸಂಘದ ಪದವಿಯ ಮೋಹ ಇಲ್ಲದೆ ಹೋದರೂ ಅನೇಕ ಸಂಘಗಳ ಸ್ಥಾಪನೆಗೆ, ಏಳಿಗೆಗೆ ಹಾಗೂ ಅಭಿವೃದ್ಧಿ ಗಾಗಿ ನಿರಂತರವಾಗಿ ದುಡಿದಿದ್ದರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆಗೆ ವೈಯಕ್ತಿಕವಾಗಿಯೂ ಸಹಕರಿಸುತ್ತಿದ್ದ ಅವರು ವಿದ್ಯಾಭ್ಯಾಸಕ್ಕೆ ಸರ್ಕಾರ ನೀಡುತ್ತಿರುವ ಸೌಲತ್ತುಗಳ ಅರಿವು ಮೂಡಿಸುವ ಹಾಗೂ ಕೊನೆಯ ವ್ಯಕ್ತಿಗೂ ಹೆಚ್ಚೆಚ್ಚು ಸೌಲಭ್ಯ ತಲುಪುವಂತೆ ಶ್ರಮಿಸುತ್ತಿದ್ದರು. ಸರ್ಕಾರಿ ಹಾಸ್ಟೆಲ್ ಗಳಲ್ಲಿ ಮೀನು ಊಟ ಸಿಗುತ್ತಿರಲಿಲ್ಲ, ಕೇವಲ ಸಸ್ಯಾಹಾರದ ಊಟದಿಂದ ಬೇಸತ್ತು ಕರಾವಳಿ ಭಾಗದ ಬಹುತೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಧ್ಯದಲ್ಲೇ ಕುಂಠಿತಗೊಳಿಸುತ್ತಿದ್ದನ್ನು ಮನಗಂಡು ವಾರದಲ್ಲಿ ಕನಿಷ್ಠ ಒಮ್ಮೆ ತಮ್ಮ ಮನೆಯಲ್ಲೇ ಮೀನು ಫ್ರೈ/ಸುಕ್ಕಾ ಮಾಡಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದರು. ಕೆ,ಡಿ,ನಾಯ್ಕ ಅವರ ಈ ಉದಾರ ಮನಸ್ಸು ನೂರಾರು ಬಡ ವಿದ್ಯಾರ್ಥಿಗಳ ಹೃದಯ ಗೆದ್ದಿತ್ತು.
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಯಾಗಿ ಬಳಿಕ ಇಲಾಖೆಯ ಕೆಎಎಸ್, ಐಎಎಸ್ ತರಬೇತು ಸಂಸ್ಥೆಗೆ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಕೆ.ಡಿ.ನಾಯ್ಕ ಅವರು ಕಾರವಾರದಲ್ಲಿ, ಬೆಂಗಳೂರು ಹಾಗೂ ಧಾರವಾಡದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ ಇವರು ತೆಂಕಣಕೇರಿಯಲ್ಲಿ ಕೆಲಕಾಲ ತಮ್ಮ ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇವರು ಅಪ್ಪಟ ಕನ್ನಡ ಪ್ರೇಮಿಯಾಗಿದ್ದರು. ಆಡಳಿತದಲ್ಲಿ ಕನ್ನಡ ಭಾಷೆ ಅಡವಳಿಕೆ ಹಾಗೂ ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದಕ್ಕಾಗಿ ಬಳ್ಳಾರಿ ಹಾಗೂ ಕಾರವಾರದ ಜಿಲ್ಲಾ ಕಚೇರಿಯಲ್ಲಿರುವಾಗ ಪ್ರಶಸ್ತಿ ಪ್ರಮಾಣ ಪತ್ರ ದೊರಕಿತ್ತು.
ದೇವಸ್ಥಾನ ನಿರ್ಬಂಧಕ್ಕೆ ಸೆಡ್ಡು ...
ಗ್ರಾಮದಲ್ಲಿ ನಿರ್ದಿಷ್ಟ ಜಾತಿಯವರ ದೇವಸ್ಥಾನವಿದ್ದು ನಾಮಧಾರಿಗಳಿಗೆ ದೇವರ ಪೂಜೆಗೆ ಅವಕಾಶ ನೀಡುತ್ತಿರಲಿಲ್ಲ ಹಾಗೂ ಇದು ಆಗಾಗ ಜಾತಿ ಘರ್ಷಣೆಗೆ ಕಾರಣವಾಗುತಿತ್ತು, ದೇವರ ಪೂಜೆಯಲ್ಲಿ ತಾರತಮ್ಯವನ್ನು ವಿರೋಧಿಸಿದ್ದ ಕೆ,ಡಿ,ನಾಯ್ಕ ಅವರು ಯುವಕರಾಗಿದ್ದಾಗ ಗ್ರಾಮದಲ್ಲಿ ಕುಲದೇವರಾದ ಶ್ರೀ ವೆಂಕಟರಮಣ ದೇವರ ವಿಗ್ರಹ ಪ್ರತಿಷ್ಠಾಪಿಸಿ, ಸಮಾಜದ ಪ್ರತ್ಯೇಕ ದೇವಸ್ಥಾನಕ್ಕೆ ನಾಂದಿ ಹಾಡಿದರು. ಪ್ರಸ್ತುತ ಪ್ರತಿವರ್ಷ ವೆಂಕಟರಮಣ ದೇವರ ಜಾತ್ರೆ ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಬಂಗಾರಪ್ಪ ಜೊತೆ ಒಡನಾಟ ...
ಕೆ,ಡಿ,ನಾಯ್ಕ ಅವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ರಾಜಕೀಯ ಜೀವನದ ಆರಂಭದಲ್ಲಿ ನಿಕಟ ಒಡನಾಟ ಹೊಂದಿದ್ದರು, ಬಂಗಾರಪ್ಪ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಜಿಲ್ಲೆಯ ಮೊಟ್ಟಮೊದಲ ಬಾರಿಗೆ ಕರಾವಳಿ ಭಾಗಕ್ಕೆ ಪರಿಚಯಿಸಿದ ಹಿರಿಮೆ ಕೆ.ಡಿ. ನಾಯ್ಕ ಅವರಿಗೆ ಸಲ್ಲುತ್ತದೆ. ಯಾವುದೇ ರೀತಿಯ ಸಹಾಯ ಅಥವಾ ಸ್ವಹಿತಾಸಕ್ತಿ ಇಲ್ಲದೇ ಹೋದರೂ ಸಮಾಜದ ಹಿರಿಯ ಮುಖಂಡರಾಗಿ ಬೆಳೆದ ಎಸ್. ಬಂಗಾರಪ್ಪ ಅವರ ಅಪ್ಪಟ ಅಭಿಮಾನಿಯಾಗಿ ರಾಜಕೀಯವಾಗಿ ಬೆಂಬಲಿಸುತ್ತಿದ್ದರು. ಇದರಿಂದ ಸರ್ಕಾರಿ ಸೇವೆಯಲ್ಲಿದ್ದ ಕೆ,ಡಿ,ನಾಯ್ಕ ಅವರು ವಿರೋದಿ ಬಣದ ಕೆಂಗಣ್ಣಿಗೆ ಗುರಿಯಾಗಿ ಅನೇಕ ಬಾರಿ ವರ್ಗಾವಣೆಯ ಬಿಸಿ ಎದುರಿಸಿದ್ದರು. ಏಕೆಂದರೆ, ಕರ್ತವ್ಯದಲ್ಲಿ ನಿಷ್ಟಾವಂತ ಹಾಗೂ ದಕ್ಷ ಅಧಿಕಾರಿ ಯಾಗಿದ್ದ ಕಾರಣ ಕೆ.ಡಿ.ನಾಯ್ಕ ವಿರುದ್ಧ ಬೇರೆ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಎಷ್ಟೇ ಎಂದರೆ ಅನುಭವಿಸಿದರೂ, ಬಂಗಾರಪ್ಪ ಅವರ ಮೇಲೆ ಕಿಂಚಿತ್ತು ಅಭಿಮಾನ ಕಡಿಮೆ ಮಾಡಿರಲಿಲ್ಲ, ಹಾಗೆಯೇ ಬಂಗಾರಪ್ಪ ಅವರು ಸಹ ಇವರೊಂದಿಗೆ ಅಷ್ಟೇ ಆತ್ಮೀಯತೆಯನ್ನು ಉಳಿಸಿಕೊಂಡಿದ್ದರು.
ಗಿರಿ ಪಿಕಳೆ ನೆಚ್ಚಿನ ಶಿಷ್ಯ ...
ಕೆ,ಡಿ,ನಾಯ್ಕ ಅವರು ಅಂಕೋಲಾದ ಪ್ರತಿಷ್ಟಿತ ಪಿ.ಎಂ.ಎಚ್. ಸ್ಕೂಲ್ ಸಂಸ್ಥಾಪಕರಲ್ಲಿ ಪ್ರಮುಖರಾದ ಶ್ರೀ ಗಿರಿ ಪಿಕಳೆ ಅವರ ನೆಚ್ಚಿನ ಶಿಷ್ಯರಾಗಿದ್ದರು ಹಾಗೂ ಪಿ.ಎಂ.ಎಚ್. ಸ್ಕೂಲ್ ಸಂಸ್ಥಾಪನೆ ನಿಟ್ಟಿನಲ್ಲಿ ದುಡಿದಿದ್ದರು. ಹಾಗೆಯೇ, ಕೆ,ಡಿ,ನಾಯ್ಕ ಅವರು ಸಹ ತಮ್ಮ ಕೊನೆಯ ದಿನಗಳ ವರೆಗೂ ತಮ್ಮ ಗುರು ಆಗಿದ್ದ ಗಿರಿ ಪಿಕಳೆ ಅವರ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಹೊಂದಿದ್ದರು. ಹೀಗಾಗಿ ಅವರ ಅನೇಕ ಕವನ ಸಂಕಲನದಲ್ಲಿ ಗಿರಿ ಪಿಕಳೆ ಕುರಿತು ಪದ್ಯಗಳನ್ನು ಕಾಣಬಹುದಾಗಿದೆ.
.. ಮುಂದುವರೆಯಲಿದೆ.