ರಾಜ್ಯ ನಾಮಧಾರಿ ಯುವ ವೇದಿಕೆ ಚೆಸ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯ
ಬೆಂಗಳೂರು : ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯಾವಳಿ ಕಾರ್ಯಕ್ರಮ ರವಿವಾರ 12-01-2020ರಂದು ಯಶಸ್ವಿಯಾಗಿ ನೆರವೇರಿತು. ಚೆಸ್ ಪಂದ್ಯಾವಳಿಯಲ್ಲಿ ನಾಮಧಾರಿ ಸಮುದಾಯದ 60 ಸ್ಪರ್ಧಾಳುಗಳು(ಬಾಲಕ/ಬಾಲಕಿಯರು) ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವೇದಿಕೆ ಅಧ್ಯಕ್ಷರಾದ ಗಣಪತಿ ನಾಯ್ಕ ಅವರು ಪರಿಚಯ ಭಾಷಣ ಮಾಡಿ, ಯುವ ವೇದಿಕೆ 2009ರಲ್ಲಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ತರಬೇತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆವು. ಕಾರಣಾಂತರದಿಂದ ಕೆಲವು ವರ್ಷಗಳ ಕಾಲ ಯುವ ವೇದಿಕೆಯಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗಿರಲಿಲ್ಲ. ಆದರೆ, ಈಗ ಮತ್ತೊಮ್ಮೆ ಯುವ ವೇದಿಕೆ ಕಾರ್ಯೋನ್ಮುಖವಾಗಲಿದೆ, ಎಂದು ಹೇಳಿದರು.
ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಪ್ರತಿಷ್ಟಿತ ಸಂಸ್ಥೆ ಐಐಎಮ್ ನ ಡೀನ್ ಆಗಿರುವ ಗೋಪಾಲ್ ನಾಯ್ಕ ಅವರು, ನಮ್ಮ ಸಮುದಾಯದಿಂದ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ.ನಾಯ್ಕ, ಪ್ರೌಡಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಹೇಮಲತಾ ಜಿ.ನಾಯ್ಕ, ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಮದಾಸ್ ನಾಯ್ಕ, ಮಾಜಿ ಅಧ್ಯಕ್ಷ ಜಿ.ಬಿ.ನಾಯ್ಕ, ಖಜಾಂಚಿ ನಾಗೇಶ್ ನಾಯ್ಕ ಹಾಗೂ ಸಹಕಾರ್ಯದರ್ಶಿ ಹರೀಶ ನಾಯ್ಕ ಪಾಲ್ಗೊಂಡಿದ್ದರು.
ಹೊನ್ನಾವರದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಸಮುದಾಯ ಭವನ ಹಾಗೂ ಹಾಸ್ಟೆಲ್ ನಿರ್ಮಾಣ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಟ್ಟಡದ ಕುರಿತು ಮಾತನಾಡಿದರು ಅಲ್ಲದೇ, ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸುವಂತೆ ಸಮಾಜದ ಜನರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನದ ಭಾಗವತ ಗಾನದ ಅದ್ಭುತ ಪ್ರದರ್ಶಿನ ನೀಡಿದ ವೆಂಕಟರಮಣ ನಾಯ್ಕ ಪ್ರೇಕ್ಷಕರ ಮನಃ ಗೆದ್ದರು, ಅಲ್ಲದೇ ಬೇಡಿಕೆ ಮೇರೆಗೆ ಎರಡನೇ ಬಾರಿ ಪ್ರದರ್ಶನ ನೀಡಿದರು. ಗಾಯಕ ಯಶವಂತ್ ನಾಯ್ಕ ತಮ್ಮ ಚಿತ್ರಗೀತೆಗಳಿಂದ ಸಭಿಕರನ್ನು ರಂಜಿಸಿದರು. ಇದಲ್ಲದೇ, ಭರತನಾಟ್ಯ, ನೃತ್ಯ ಹಾಗೂ ಏಕಪಾತ್ರಾಭಿನಯದ ಕಲಾವಿದರು ತಮ್ಮ ಅದ್ಭುತ ಕಳೆಯ ಪ್ರದರ್ಶನ ನೀಡಿದರು.
ಮಧ್ಯಾಹ್ನ ಊಟದ ಬಳಿಕ ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಾಳುಗಳಿಗೂ ಅತಿಥಿಯಾಗಿ ಆಗಮಿಸಿದ ಹಿರಿಯ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ ಅವರು ಬಹುಮಾನ ವಿತರಿಸಿ ಅಭಿನಂದಿಸಿದರು.