ಸಮಾಜದ ಮೊದಲ ಮಹಿಳಾ ಸಬ್ ಲೆಪ್ಟಿನೆಂಟ್ ಆದ ಚೈತ್ರಾ ನಾಗಪ್ಪ ನಾಯ್ಕ
ಅಂಕೋಲ : ಭಾರತೀಯ ನೌಕಾ ಪಡೆಯ ಮಹಿಳಾ ಸಬ್ ಲೆಪ್ಟಿನೆಂಟ್ ಆಗಿ ಕುಮಾರಿ ಚೈತ್ರಾ ನಾಗಪ್ಪ ನಾಯ್ಕ ಇವರು ಆಯ್ಕೆಯಾಗಿರುವುದು, ನಮ್ಮ ನಾಮಧಾರಿ ಸಮಾಜ ಹೆಮ್ಮೆ ಪಡುವ ವಿಷಯವಾಗಿದೆ. ಇತ್ತಿಚೆಗೆ ಕೇರಳದ ನೌಕಾದಳದ ಕೇಂದ್ರ ಕಛೇರಿ ಎಜಿ ಮಾಲಾದಲ್ಲಿ ನೆರವೇರಿದ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ತರಬೇತಿ ಪಡೆದ ಚೈತ್ರಾ ನಾಯ್ಕ ಅವರು ಸಬ್ ಲೆಪ್ಟಿನೆಂಟ್ ಆಗಿ ಪ್ರಮಾಣವಚನ ಸ್ವಿಕರಿಸಿದ್ದು, ಸಮಾಜ ಬಾಂಧವರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಮಾಹಿತಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಬ್ರುವಾಡ ಗ್ರಾಮದವರಾಗಿರುವ ಚೈತ್ರಾ ನಾಯ್ಕ ಅವರ ತಂದೆ ನಾಗಪ್ಪ ನಾಯ್ಕ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿಸುತ್ತಿದ್ದಾರೆ. ತಾಯಿ ಪುನೀತಿ ನಾಯ್ಕ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಎನ್ನಲಾಗಿದೆ. ಚೈತ್ರ ಅವರು ತಮ್ಮ ಶಾಲಾ ಕಾಲೇಜಿನ ದಿನಗಳಿಂದಲೇ, ಬಹುತೇಕ ಕರಾವಳಿ ಯುವಕರ ಕನಸಾಗಿರುವ, ದೇಶದ ನೌಕಾಪಡೆಗೆ ಸೇರುವ ಗುರಿಯನ್ನು ಹೊಂದಿದ್ದರು.
ಚೈತ್ರಾ ಅಂಕೋಲ ಅವರು ಧಾರವಾಡ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್) ಪದವಿ ಮುಗಿಸಿ ಪ್ರತಿಷ್ಠಿತ ಐಟಿ ಕಂಪನಿಯಾದ ಇಂಟೆಲ್ ಟೆಕ್ನಾಲಜಿಕಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಪಿಜಿಕಲ್ ಡಿಜೈನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ. ಇಂತಹ ಉತ್ತಮ ಬಹುರಾಷ್ಟ್ರೀಯ ಕಂಪನಿ ಕೆಲಸ ಬಿಟ್ಟು ದೇಶ ಸೇವೆಯ ಪಣತೊಟ್ಟು ನೌಕಾಪಡೆ ಸೇರಿರುವ ದೃಡ ನಿರ್ಧಾರ ಕೈಗೊಂಡ ಚೈತ್ರಾ ನಾಯ್ಕ ನಡೆ ಇತರರಿಗೆ ಮಾದರಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ನಮ್ಮ ನಾಮಧಾರಿ ಸಮುದಾಯದ ಮೊದಲ ಮಹಿಳಾ ಸಬ್ ಲೆಪ್ಟಿನೆಂಟ್ ಆಗಿ ಆಯ್ಕೆಯಾಗಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಈಗ ಪ್ರಸ್ತುತ ಭಾರತೀಯ ನೌಕಾ ಪಡೆ ಸೇರಿರುವ ಚೈತ್ರಾ ನಾಯ್ಕ ಅವರ ಮುಂದಿನ ಭವಿಷ್ಯ ಒಳ್ಳೆಯದಾಗಲಿ, ಅವರು ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ನಾಮಧಾರಿ.ಕಂ ತಂಡದ ಹಾರೈಕೆ.