logo logo

ಹಿರಿಯ ನ್ಯಾಯವಾದಿ, ಸಮಾಜಸೇವಕ ಬಿ.ಡಿ.ನಾಯ್ಕ ಇನ್ನಿಲ್ಲ

ಅಂಕೋಲ : ಸಮಾಜದ ಹಿರಿಯ ನ್ಯಾಯವಾದಿ, ಸಮಾಜಸೇವಕ ಹಾಗೂ ರಾಜಕಾರಿಣಿ ಆದ ಬಿ.ಡಿ.ನಾಯ್ಕ ಅವರು ಕಳೆದ ಅಕ್ಟೋಬರ್ 22 ರಂದು ದೈವಾದೀನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಲ್ಲೇ ತಮ್ಮ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಂಕಿಕೊಡ್ಲ ದವರಾದ ಇವರು ಬಹುತೇಕ ಕಾಲ ಅಂಕೋಲಾ ತಾಲೂಕಿನಲ್ಲೇ ನೆಲೆಸಿದ್ದರು. ಅಲ್ಲದೇ ಕಾರವಾರ, ಭಟ್ಕಳ, ಕುಮಟಾ ತಾಲೂಕಿನಲ್ಲೂ ಕೆಲಕಾಲ ನೆಲೆಸಿ ಸೇವೆ ಸಲ್ಲಿಸುವುದರ ಮೂಲಕ ಎಲ್ಲೆಡೆ ಹೆಸರುವಾಸಿಯಾಗಿದ್ದರು.

ಸಾಂಸ್ಕೃತಿಕ, ಜನಪದ ಕಲೆಗಳಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಇವರು ಅತ್ಯುತ್ತಮ ಯಕ್ಷಗಾನಪಟು ಆಗಿದ್ದರು. ಸ್ಪುರದ್ರೂಪಿ, ಮೃದುಭಾಷಿ, ಚತುರ ವಾಗ್ಮಿಯಾಗಿದ್ದ ಬಿ.ಡಿ.ನಾಯ್ಕರವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಸೇರಿದಂತೆ ಅಪಾರ ಬಂಧುಗಳು ಹಾಗೂ ಮಿತ್ರರನ್ನು ಅಗಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ಕೊಂಕಣ ರೇಲ್ವೆ, ಸೀ ಬರ್ಡ್ ಆಭಿವೃದ್ಧಿ ಯೋಜನೆಗಳಲ್ಲಿ ನೂರಾರು ಭೂ ನಿರಾಶ್ರಿತರ ಪರವಾಗಿ ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ ಕೊಡಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ವೃತ್ತಿ ಜೀವನದಲ್ಲಿ ಅನೇಕ ಬಹುಮುಖ್ಯ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಡಿಸ್ಟ್ರಿಕ್ಟ್ ಗವರ್ನಮೆಂಟ್ ಪ್ಲೀಡರ್, ಕೆ.ಎಸ್.ಆರ್.ಟಿ.ಸಿ ಲೀಗಲ್ ಅಡ್ವೈಸರ್ ಆಗಿ, ಲ್ಯಾಂಡ್ ಟ್ರಿಬ್ಯೂನಲ್ ಮೆಂಬರ್ ಆಗಿದ್ದರು. ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಹರಿಜನ, ಗಿರಿಜನರಿಗಾಗಿ ಸಾಕಷ್ಟು ಹೋರಾಡಿದ್ದರು.

ಬಿಎ ಪದವಿಯ ನಂತರ ಎಲ್.ಎಲ್.ಬಿ ಮಾಡಿ ವಕೀಲ ವೃತ್ತಿ ಆರಂಭಿಸಿದ ಅವರು 26ರ ವಯಸ್ಸಿನಲ್ಲೆ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭೈರವ್ ಮಾಸ್ತರರು ಎಂದೇ ಹೆಸರುವಾಸಿಯಾಗಿದ್ದ ಅವರು ತಮ್ಮ 28 ವಯಸ್ಸಿನಲ್ಲೇ ಬಂಕಿಕೊಡ್ಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಈ ಸಂದರ್ಭದಲ್ಲಿ ತಿರಾ ಹಿಂದುಳಿದ ಪ್ರದೇಶವಾಗಿದ್ದ ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯ, ಶಾಲೆ ನಿರ್ಮಾಣ ಹಾಗೂ ಇತರೆ ಸೌಲಭ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ ಗೌರವ ಇವರಿಗೆ ಸಲ್ಲುತ್ತದೆ. ಕಡುಬಡವರಿಗೆ ವಿಶೇಷವಾಗಿ ಹರಿಜನರಿಗೆ ಮನೆ ಕಟ್ಟಿಸುವುದು, ಹಂಚಿಕೆ ಸೇರಿದಂತೆ ಅನೇಕ ಸಮಾಜ ಕಲ್ಯಾಣದಲ್ಲಿ ಮುತುವರ್ಜಿ ವಹಿಸಿ ಸಮಾಜಸೇವೆಯಲ್ಲಿ ಸರ್ಕಾರದ ಪ್ರಶಸ್ತಿ ಪಡೆದು ಹೆಸರುವಾಸಿಯಾಗಿದ್ದರು.

ಜಿಲ್ಲೆಯ ರಾಜಕೀಯ ವಲಯದಲ್ಲೂ ಸಾಕಷ್ಟು ಪ್ರಭಾವಿಯಾಗಿದ್ದ ಬಿ.ಡಿ.ನಾಯ್ಕ ಅವರು, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಕೆಲಕಾಲ ರಾಜಕಾರಣದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು, 1989ರ ಲೋಕಸಭೆಗೆ ಕೆನರಾ ಕ್ಷೇತ್ರಕ್ಕೆ ಜನತಾದಳ ಪಕ್ಷದಿಂದ ಚುನಾವಣಾ ಕಣಕ್ಕಿಳಿದು, ಅತ್ಯಂತ ಕಡಿಮೆ ಸಮಯದ ಹಾಗೂ ಕಡಿಮೆ ಪ್ರಚಾರದಿಂದಲೂ ತಮ್ಮ ಪ್ರತಿಸ್ಪರ್ಧಿಗಳಿಗೆ ಸಾಕಷ್ಟು ಉತ್ತಮ ಸ್ಪರ್ಧೆ ನೀಡಿದ್ದರು.

ಭೈರವ್ ಮಾಸ್ತರರ ಅಗಲುವಿಕೆ ಸಮಾಜಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನ್ಯೂಸ್.ನಾಮಧಾರಿ.ಕಂ ಬಳಗದ ವತಿಯಿಂದ ಆ ಭಗವಂತನಲ್ಲಿ ಪ್ರಾರ್ಥನೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್